ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂ. ವಂಚನೆ

ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಆರು ಲಕ್ಷ ರೂ. ವಂಚನೆ ಮಾಡಿರುವ ಶಂಶೀರ್ ರಿಜ್ವಾನ್ ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಳೆದುಕೊಂಡ ಹಣವನ್ನು ವಾಪಸ್ ಕೊಡಿಸಬೇಕೆಂದು ಸಂತ್ರಸ್ತ ಮಹಮ್ಮದ್ ನಿಯಾಝ್ ಎಂಬವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಮಂಗಳೂರಿನ ಬಂದರ್‌ನಲ್ಲಿನ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಸಂಸ್ಥೆಯ ಮಾಲೀಕ ಶಂಶೀರ್ ರಿಜ್ವಾನ್ ತನಗೆ ದಕ್ಷಿಣ ಕೊರಿಯಾದಲ್ಲಿ 2 ಲಕ್ಷ ರೂ. ಸಂಬಳದ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ. ಇದಕ್ಕಾಗಿ ಆರು ಲಕ್ಷ ರೂ. ನಗದು ಬೇಡಿಕೆಯಿಟ್ಟಿದ್ದ. ಅದರಂತೆ ನಾನು 2019 ಜುಲೈ 6ರಂದು 3.50 ಲಕ್ಷ ರೂ. ಹಾಗೂ 2020 ಫೆಬ್ರವರಿ 23ರಂದು ಇಂಡೋನೇಷ್ಯಾದಲ್ಲಿ 2.50 ಲಕ್ಷ ರೂ. ನೀಡಿತ್ತೇನೆ ಎಂದು ಮಹಮ್ಮದ್ ನಿಯಾಝ್ ದೂರಿನಲ್ಲಿ ತಿಳಿಸಿದ್ದಾರೆ.

ಮೊದಲ ಕಂತಿನ ಹಣ ಪಡೆದ ಬಳಿಕ ನೇರವಾಗಿ ದಕ್ಷಿಣ ಕೊರಿಯಾಕ್ಕೆ ವೀಸಾ ಇಲ್ಲ ಎಂದು ತಾತ್ಕಾಲಿಕ ವೀಸಾದಲ್ಲಿ ಇಂಡೋನೇಷ್ಯಾಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಆ ಮನೆಯಲ್ಲಿ ಇನ್ನೂ ಮೂವರು ಇದ್ದರು. ಅಲ್ಲಿ ಖಾಯಂ ವೀಸಾ ಸಿದ್ಧಗೊಳ್ಳುತ್ತಿದೆ ಸ್ವಲ್ಪ ಕಾಲ ಕಾಯುವಂತೆ ಶಂಶೀರ್ ರಿಜ್ವಾನ್ ತಿಳಿಸಿದ್ದ. ಆದರೆ 2020 ಸೆಪ್ಟೆಂಬರ್ 6ರಂದು ಅಕ್ರಮ ವಾಸ್ತವ್ಯ ಹೂಡಿರುವ ಆರೋಪದ ಮೇಲೆ ನಮ್ಮನ್ನು ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದರು. ಆದರೆ ಆ ಬಳಿಕ ಕಾನೂನು ಹೋರಾಟ ನಡೆಸಿ ನಾವು ಜೈಲಿನಿಂದ ಹೊರ ಬಂದೆವು. ಜೈಲು‌ಪಾಲಾದ ಬಳಿಕ ಶಂಶೀರ್ ರಿಜ್ವಾನ್ ನಮ್ಮ ಸಂಪರ್ಕವನ್ನೇ ಕಡಿದುಕೊಂಡಿದ್ದಾನೆ. ಇದೇ ರೀತಿ ಆತ ತಾತ್ಕಾಲಿಕ ವೀಸಾದಲ್ಲಿ ಮಂಗಳೂರಿನ ಕೆಲವರನ್ನು ಕಳುಹಿಸಿ ವಂಚನೆಗೈದಿದ್ದ ಎಂಬ ಮಾಹಿತಿ ಆ ಬಳಿಕ ನಮಗೆ ತಿಳಿದು ಬಂದಿತ್ತು ಎಂದು ಮಹಮ್ಮದ್ ತಿಳಿಸಿದ್ದಾರೆ.

ನಾನು ಅಲ್ಲಿಂದ ಬಂದ ಬಳಿಕ ಆತನನ್ನು ಸಂಪರ್ಕಿಸಿದಾಗ 2021 ಜ.21ರಂದು ಉಳ್ಳಾಲ ದರ್ಗಾದ ಬಳಿ ಬಂದು ಆರು ಲಕ್ಷ ರೂ. ನೀಡುವುದಾಗಿ ತಿಳಿಸಿದ್ದ. ಆದರೆ ಆ ದಿನ ಅಲ್ಲಿಗೆ ಬಂದ ಆತ ಕೇವಲ 2 ಲಕ್ಷ ರೂ. ನೀಡುವುದಾಗಿ ಹೇಳುತ್ತಾನೆ. ಆತ ನನ್ನಿಂದ ಪಡೆದ ಆರು ಲಕ್ಷ ರೂ.ವನ್ನು ವಂಚನೆಗೈದಿದ್ದು, ಆದ್ದರಿಂದ ತಕ್ಷಣ ಪೊಲೀಸ್ ಇಲಾಖೆ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. ಇದೇ ರೀತಿ ಹಲವರಿಗೆ ಆತ ವಂಚನೆ ಮಾಡಿದ್ದು, ನಮಗೆ ತಿಳಿದು ಬಂದಿದೆ. ತಕ್ಷಣ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮ ಆರು ಲಕ್ಷ ರೂ‌. ಮರು ಪಾವತಿ ಮಾಡಿಸಬೇಕೆಂದು ಅವರು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

27/01/2021 08:07 pm

Cinque Terre

10.16 K

Cinque Terre

4

ಸಂಬಂಧಿತ ಸುದ್ದಿ