ಬಂಟ್ವಾಳ: ಬಾಯಿ ಹುಣ್ಣಿಗೆ ಎಂದು ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲಾಗಿ ಖಾಲಿಯಾದ ಔಷಧಿ ಬಾಟಲಲ್ಲಿಟ್ಟಿದ್ದ ಕಳೆನಾಶಕ ವನ್ನು ಸೇವಿಸಿ ಗ್ರಾಪಂ ನಿಕಟಪೂರ್ವ ಸದಸ್ಯ ಹಾಗೂ ಹಾಲಿ ಅಭ್ಯರ್ಥಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ನಡೆದಿದೆ.
ಕಾವಳಮುಡೂರು ಗ್ರಾಮದ, ಅರ್ಗತ್ಯಾರು ನಿವಾಸಿ ಜಯಂತ ಪ್ರಭು(58) ಮೃತಪಟ್ಟವರು. ಡಿ.21ರಂದು ರಾತ್ರಿ 11 ಗಂಟೆಯ ವೇಳೆ ತನ್ನ ಬಾಯಿ ಹುಣ್ಣಿಗೆಂದು ತೆಗೆದುಕೊಳ್ಳುತ್ತಿದ್ದ ಔಷಧಿಯ ಬದಲಾಗಿ ಖಾಲಿಯಾಗಿದ್ದ ಔಷಧಿ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ಟ್ರೈಕಾಟ್ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆನಾಶಕ ಔಷಧಿಯನ್ನು ಸಿರಪ್ ಎಂದು ತಪ್ಪಾಗಿ ಭಾವಿಸಿ ಅಲ್ಪ ಪ್ರಮಾಣದಲ್ಲಿ ಸೇವಿಸಿದ್ದರು.
ಮರುದಿನ ಗ್ರಾ.ಪಂ. ಚುನಾವಣೆಯಲ್ಲಿ ಮತದಾನ ಮಾಡಿದ್ದರಲ್ಲದೆ ಮತಗಟ್ಟೆಯಲ್ಲೂ ಒಂದಷ್ಟು ಹೊತ್ತು ಕಳೆದು, ಕೊನೆಕ್ಷಣದ ವರೆಗೂ ಮತದಾರರ ಮನವೊಲಿಸುವಲ್ಲಿಯೂ ತೊಡಗಿದ್ದರು. ಬಳಿಕ ರಾತ್ರಿ ವೇಳೆಗೆ ದಿಢೀರ್ ಅಸ್ವಸ್ಥರಾಗಿದ್ದರೆನ್ನಲಾಗಿದ್ದು ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ಈ ಬಗ್ಗೆ ಅವರ ಪುತ್ರ ನೀಡಿರುವ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಜಯಂತ ಪ್ರಭು ಅವರು ಡಿ.22 ರಂದು ನಡೆದ ಗ್ರಾ.ಪಂ. ಚುನಾವಣೆಗೆ ಕಾವಳಮೂಡೂರು ಪಂಚಾಯಿತಿ ವಾರ್ಡ್ 3ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದರು.
Kshetra Samachara
28/12/2020 08:10 pm