ಮಂಗಳೂರು: ಉಳ್ಳಾಲದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜ ದೈವಸ್ಥಾನದ ಕಾಣಿಕೆ ಹುಂಡಿಗೆ ದುಷ್ಕರ್ಮಿಗಳು ಕಾಂಡೋಮ್ ಮತ್ತು ನಿಂದನೆ ಬರಹದ ಭಿತ್ತಿಪತ್ರ ಹಾಕಿ ವಿಕೃತಿ ಮೆರೆದಿದ್ದಾರೆ!.
ಕಾಂಡೋಮ್ ಹಾಕಿರುವುದು ಮಾತ್ರವಲ್ಲ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಇತರ ಬಿಜೆಪಿ ನಾಯಕರ ಪೋಟೊ ವಿರೂಪಗೊಳಿಸಿ ಅವಹೇಳನಕಾರಿಯಾಗಿ ಬರೆಯಲಾಗಿದೆ.
ಉಳ್ಳಾಲದ ಶ್ರೀ ಕೊರಗಜ್ಜ ಸೇವಾ ಸಮಿತಿಯವರು ಪ್ರತಿ ತಿಂಗಳ ಸಂಕ್ರಾಂತಿಯಂದು ಕಾಣಿಕೆ ಡಬ್ಬಿಯಲ್ಲಿರುವ ಹಣ ತೆಗೆಯುವ ಪದ್ಧತಿ ಹೊಂದಿದ್ದು, ಈ ಬಾರಿ ಸ್ವಲ್ಪ ವಿಳಂಬವಾಗಿ ಅಂದರೆ ಮಂಗಳವಾರ ಸಂಜೆ ಕಾಣಿಕೆ ಡಬ್ಬಿ ತೆರೆದು ನೋಡಿದಾಗ ಡಬ್ಬಿಯೊಳಗೆ ಕಾಂಡೋಮ್‌ಗಳು ಹಾಗೂ ಪ್ರಚೋದನಕಾರಿ ಬರಹದ ಫ್ಲೆಕ್ಸ್ ಕಂಡು ಬಂದಿದೆ.
ಬೆಂಗಳೂರಿನ ಕೆ.ಆರ್. ಐಡಿಯಲ್ ನಿಗಮ ಅಧ್ಯಕ್ಷ ಎಂ. ರುದ್ರೇಶ್ ಅವರಿಗೆ ಶುಭ ಕೋರಿದ ಫ್ಲೆಕ್ಸ್ ಇದಾಗಿದ್ದು, ಇದರಲ್ಲಿ ಸಿಎಂ ಬಿಎಸ್‌ವೈ, ಪುತ್ರ ವಿಜಯೇಂದ್ರ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ಸಹಿತ ಹಲವು ಬಿಜೆಪಿ ನಾಯಕರ ಭಾವಚಿತ್ರಗಳಿದ್ದು, ಎಲ್ಲವನ್ನೂ ಗೀಚಿ ವಿರೂಪಗೊಳಿಸಲಾಗಿದೆ.
''ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರ ಹಾಕಲ್ಪಟ್ಟ ದ್ರೋಹಿ ದೂತರು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂ ಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾದಿ ಕಾಲದಿಂದಲೂ ಮೆರೆಯಲ್ಪಡುತ್ತಿದ್ದಾರೆ. ಎಚ್ಚರ, ರಕ್ಷ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ, ಬಾಚಿ ತಿಂದು ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದೆ. ಜನರು ಸಿದ್ಧರಾಗಬೇಕು'' ಎಂದು ಫ್ಲೆಕ್ಸ್‌ನಲ್ಲಿ ಬಹು ಉದ್ರೇಕಕಾರಿಯಾಗಿ ಬರೆಯಲಾಗಿದೆ.
ಈ ಕುರಿತು ಶ್ರೀ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲು ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಶ್ರೀ ಕೊರಗಜ್ಜ, ಶ್ರೀ ಗುಳಿಗಜ್ಜ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ವಿಕೃತಿ ಮೆರೆದ ಹಾದಿ ತಪ್ಪಿದ ಈ ದುಷ್ಟರಿಗೆ ಶ್ರೀ ಕ್ಷೇತ್ರದ ಕಾರಣಿಕ ಶಕ್ತಿಗಳಾದ ಗುಳಿಗಜ್ಜ ಮತ್ತು ಕೊರಗಜ್ಜ ದೈವಗಳು ಶಿಕ್ಷೆ ನೀಡಬೇಕು ಎಂದು ಪ್ರಾರ್ಥಿಸಲಾಯಿತು.
ಇತ್ತೀಚೆಗಷ್ಟೇ ಮಂಗಳೂರಿನ ಕೊಟ್ಟಾರದ ಶ್ರೀ ಬಬ್ಬುಸ್ವಾಮಿ ಹಾಗೂ ಅತ್ತಾವರದ ಬಾಬುಗುಡ್ಡೆಯ ಶ್ರೀ ಕೊರಗಜ್ಜನ ಕಟ್ಟೆಯ ಕಾಣಿಕೆ ಡಬ್ಬಿಯಲ್ಲಿಯೂ ಇದೇ ರೀತಿಯಾಗಿ ಕಾಂಡೋಮ್ ಹಾಕಿ, ನಿಂದನೆಯ ಬರಹದ ಪತ್ರಗಳು ಪತ್ತೆಯಾಗಿತ್ತು.
Kshetra Samachara
20/01/2021 12:13 pm