ಬಂಟ್ವಾಳ: ಮದುವೆ ಹಾಲ್ ನಲ್ಲಿ ಮಹಿಳೆಯರ ಬ್ಯಾಗ್, ಮಕ್ಕಳ ಕತ್ತಿನಿಂದ ಚಿನ್ನಾಭರಣ ಎಗರಿಸುತ್ತಿದ್ದ ಆರೋಪದಲ್ಲಿ ಫಾತಿಮಾ ಶಹನಾಝ್ ಎಂಬಾಕೆಯನ್ನು ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದು, ಆಕೆಯಿಂದ 234 ಗ್ರಾಂ ಚಿನ್ನ ವಶಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ ಹಾಲ್ ಗಳಲ್ಲಿ ಮಹಿಳೆಯರ ಬ್ಯಾಗ್, ಚಿಕ್ಕ ಮಕ್ಕಳ ಕತ್ತಿನಿಂದ ಚಿನ್ನದ ಸರ ಕಳವಾಗುತ್ತಿರುವ ಬಗ್ಗೆ ಹಾಲ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಆಧರಿಸಿ ಹಾಲ್ ಮಾಲೀಕರು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಗುರುವಾರ ಪಾಣೆಮಂಗಳೂರಿನ ಆಡಿಟೋರಿಯಂವೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮಹಿಳೆಯೊಬ್ಬಳು ಹೆಣ್ಣುಮಗುವೊಂದನ್ನು ಪುಸಲಾಯಿಸಿ ಆ ಮಗುವಿನ ಕತ್ತಿನಿಂದ ಚಿನ್ನದ ಸರ ಕಸಿಯಲು ಯತ್ನಿಸಿದಾಗ ಮಗು ಕಿರುಚಿತ್ತು. ತಕ್ಷಣ ಅಲ್ಲಿ ಸೇರಿದ್ದವರು ಮಹಿಳೆಯನ್ನು ಹಿಡಿದು ಬಂಟ್ವಾಳ ನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿ ಈ ಮಹಿಳೆಯ ವಿಚಾರಣೆ ನಡೆಸಿದಾಗ ಹಲವು ಮದುವೆ ಹಾಲ್ ನಲ್ಲಿ ಈ ಕೃತ್ಯ ನಡೆಸಿರುವುದನ್ನು ಬಾಯಿಬಿಟ್ಟಿದ್ದಳು. ಕಳವುಗೈದಿರುವ ಚಿನ್ನಾಭರಣ ಕರಗಿಸಿ ಹೊಸ ರೂಪ ನೀಡಿರುವ ಸುಮಾರು 234 ಗ್ರಾಂ ಚಿನ್ನವನ್ನು ಫಾತಿಮಾಳಿಂದ ವಶಪಡಿಸಲಾಗಿದೆ. ಉಳಿದಂತೆ ಒಂದಷ್ಟು ಚಿನ್ನ ಮಾರಾಟ ಮಾಡಿ ಬಂದಿರುವ ಹಣ ತನ್ನ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿದ್ದಾಳೆಂದು ತಿಳಿದು ಬಂದಿದೆ. 10 ವರ್ಷಗಳಿಂದ ಆಕೆ ಈ ಕೃತ್ಯದಲ್ಲಿ ತೊಡಗಿದ್ದಾಳೆ ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಜಿಲ್ಲಾ ಎಸ್ಪಿ ಲಕ್ಷ್ಮೀನಾರಾಯಣ ಮಾರ್ಗದರ್ಶನ, ಡಿವೈಎಸ್ಪಿ ವೆಲೆಂಟಿನ್ ಡಿಸೋಜ,ಇನ್ಸ್ ಪೆಕ್ಟರ್ ನಾಗರಾಜ್ ಅವರ ನಿರ್ದೇಶನದಂತೆ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ತಂಡ ಮುಂದಿನ ತನಿಖೆ ನಡೆಸುತ್ತಿದೆ.
Kshetra Samachara
11/12/2020 09:37 pm