ನೆಲ್ಯಾಡಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.
ನೆಲ್ಯಾಡಿ ನಿವಾಸಿ ಬಿಜು( 38 ವರ್ಷ) ಎಂಬಾತ ತನ್ನ ಪತ್ನಿ ಶೈನಿ (33 ವರ್ಷ) ಹಾಗೂ ಪತ್ನಿಯ ಚಿಕ್ಕಮ್ಮ ಝಾನ್ಸಿ (36 ವರ್ಷ) ಎಂಬವರ ಮೇಲೆ ಆ್ಯಸಿಡ್ ಎರಚಿದ್ದಾನೆ.
ಆ್ಯಸಿಡ್ ನಿಂದಾಗಿ ಇಬ್ಬರ ಮುಖ, ಕಣ್ಣಿನ ಭಾಗ ಸುಟ್ಟು ಹೋಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಬಿಜು ಹಾಗೂ ಆತನ ಪತ್ನಿ ಶೈನಿ ನಡುವೆ ಕಲಹ ಏರ್ಪಟಿದ್ದು, ಈ ಹಿನ್ನೆಲೆಯಲ್ಲಿ ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳ ಜೊತೆಗೆ ವಾಸವಾಗಿದ್ದರು.
ಅಲ್ಲಿಂದ ಶೈನಿಯವರು ತನ್ನ ಚಿಕ್ಕಮ್ಮ ಝಾನ್ಸಿಯವರ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು.
ಎಂದಿನಂತೆ ಇಂದು ಬೆಳಿಗ್ಗೆ 6 ಗಂಟೆಯ ವೇಳೆಗೆ ಶೈನಿ ಹಾಗೂ ಝಾನ್ಸಿಯವರು ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಕಾದು ಕುಳಿತಿದ್ದ ಆರೋಪಿ ಬಿಜು ಇಬ್ಬರ ಮೇಲೂ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿಯುತ್ತಲೇ ಶೈನಿಯವರ ಚಿಕ್ಕಪ್ಪ ಏಲಿಯಸ್, ಸ್ಥಳಕ್ಕೆ ಆಗಮಿಸಿದ್ದು ಇಬ್ಬರನ್ನೂ ರಿಕ್ಷಾದಲ್ಲಿ ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಆ್ಯಸಿಡ್ ದಾಳಿಯಿಂದಾಗಿ ಇಬ್ಬರ ಮುಖ ಹಾಗೂ ದೇಹದ ಮೇಲೆಲ್ಲ ತೀವ್ರ ಸುಟ್ಟ ಗಾಯಗಳಾಗಿದೆ.
Kshetra Samachara
24/09/2020 11:35 am