ಸುಳ್ಯ: ಬಾಲಚಂದ್ರ ಕಳಗಿ ಹತ್ಯೆ ಪ್ರಕರಣದ ಆಪಿರೋಗಳಲ್ಲಿ ಓರ್ವನಾದ ಸಂಪತ್‌ಕುಮಾರ್‌ನನ್ನು ಅ.8ರಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಪೊಲೀಸ್ ಕಸ್ಟಡಿ ಹಾಗೂ ಓರ್ವನಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.
ಸಂಪತ್‌ಕುಮಾರ್ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸ್ ತಂಡವು ಕೊಲೆ ಆರೋಪಿಗಳಾದ ಮನಮೋಹನ್ ಯಾನೆ ಮನು ಕಲ್ಲುಗುಂಡಿ, ಮನೋಜ್ ಯಾನೆ ಮಧು ದಂಡಕಜೆ, ಬಿಪಿನ್ ಕೂಲಿಶೆಡ್ಡ್, ಕಾರ್ತಿಕ್ ದಂಡಕಜೆ ಹಾಗೂ ಶಿಶಿರ್ ಅಡ್ಕಾರ್ ಎಂಬವರನ್ನು ಬಂಧಿಸಿದ್ದರು.
ಸೋಮವಾರ ಇವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಮನು, ಮಧು, ಬಿಪಿನ್ ಹಾಗೂ ಕಾರ್ತಿಕ್ ಅವರನ್ನು ಪೊಲೀಸ್ ಕಸ್ಟಡಿಗೂ, ಶಿಶಿರ್‌ನನ್ನು ನ್ಯಾಯಾಂಗ ಕಸ್ಟಡಿಗೂ ಒಪ್ಪಿಸಿ ಆದೇಶಿಸಿದ್ದಾರೆ.
ಈ ಆರೋಪಿಗಳನ್ನು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಮುಂಗ್ಲಿಪಾದೆ ಎಂಬಲ್ಲಿ ಬಿಸ್ಲೆಘಾಟ್ ರಸ್ತೆಯಲ್ಲಿ ಪೊಲೀಸರು ಬಂಧಿಸಿ ಸುಳ್ಯಕ್ಕೆ ಕರೆತಂದಿದ್ದರು. ಭಾನುವಾರ ಇವರನ್ನು ಘಟನಾ ಸ್ಥಳಕ್ಕೆ ಮಹಜರಿಗಾಗಿ ಕರೆದೊಯ್ಯಲಾಗಿತ್ತು. ಸೋಮವಾರ ಈ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Kshetra Samachara
13/10/2020 07:08 am