ನೆಲ್ಯಾಡಿ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿ ಸೆ.೨೪ರಂದು ನಡೆದಿದ್ದು, ಇದೀಗ ಅರೋಪಿಯ ಪತ್ನಿ ಶೈನಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾಗಿದ್ದಾರೆ.
ನೆಲ್ಯಾಡಿ ನಿವಾಸಿ ಬಿಜು(38) ಎಂಬಾತ ತನ್ನ ಪತ್ನಿ ಶೈನಿ(33) ಹಾಗೂ ಪತ್ನಿಯ ಚಿಕ್ಕಮ್ಮ ಝಾನ್ಸಿ(36) ಎಂಬವರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ.
ಇದರಿಂದಾಗಿ ಇಬ್ಬರ ಮುಖ, ಕಣ್ಣಿನ ಭಾಗ ಸುಟ್ಟುಹೋಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಲ್ಲಿ ಝಾನ್ಸಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು,ಗಂಭೀರ ಗಾಯಗೊಂಡಿದ್ದ ಶೈನಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ವಿವರ: ಬಿಜು ಹಾಗೂ ಪತ್ನಿ ಶೈನಿ ನಡುವೆ ಕೌಟುಂಬಿಕ ಕಲಹ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಶೈನಿ ಕೊಣಾಲು ಗ್ರಾಮದ ಪಾಂಡಿಬೆಟ್ಟು ಎಂಬಲ್ಲಿರುವ ತನ್ನ ತಂದೆಯ ತಮ್ಮನ ಮನೆಯಲ್ಲಿ ಮಗಳ ಜೊತೆಗೆ ವಾಸವಾಗಿದ್ದರು.
ಅಲ್ಲಿಂದ ಶೈನಿಯವರು ತನ್ನ ಚಿಕ್ಕಮ್ಮ ಝಾನ್ಸಿಯವರ ಜೊತೆಗೆ ನೆಲ್ಯಾಡಿಯ ಆಶ್ರಮವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಸೆ24ರಂದು ಬೆಳಿಗ್ಗೆ 6ರ ವೇಳೆಗೆ ಶೈನಿ ಹಾಗೂ ಝಾನ್ಸಿಯವರು ಮನೆಯಿಂದ ಕೆಲಸಕ್ಕೆ ಹೋಗಲೆಂದು ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ಕಾದು ಕುಳಿತಿದ್ದ ಆರೋಪಿ ಬಿಜು ಇಬ್ಬರ ಮೇಲೂ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದ.
ನಂತರ ಪೊಲೀಸರು ಈತನನ್ನು ಬಂಧಿಸಿದ್ದರು. ಆ್ಯಸಿಡ್ ದಾಳಿಯಿಂದಾಗಿ ಇಬ್ಬರ ಮುಖ ಹಾಗೂ ದೇಹದಲ್ಲಿ ತೀವ್ರ ಸುಟ್ಟ ಗಾಯವಾಗಿತ್ತು.
Kshetra Samachara
10/10/2020 08:37 pm