ಸೋವಿಯತ್ ಅಳ್ವಿಕೆಯಿಂದ ಹೊರಬಂದು ಸ್ವಾತಂತ್ರ್ಯ ಪಡೆದ ಉಕ್ರೇನ್‌ಗೆ ನಿನ್ನೆ ಸ್ವಾತಂತ್ರೋತ್ಸವದ ಸಂಭ್ರಮ. ಈ ಸಂಭ್ರಮದಲ್ಲಿದ್ದಾಗ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ಸೈನ್ಯ ದಾಳಿ ನಡೆಸಿ 22ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಮಾಹಿತಿ ಹಂಚಿಕೊಂಡಿದ್ದಾರೆ.
'ನಿಮ್ಮಲ್ಲಿ ಎಷ್ಟು ಸೈನ್ಯವಿದ್ದರೂ ಎಂದಿಗೂ ನಾವು ಹೆದರುವುದಿಲ್ಲ. ನಾವು ನಮ್ಮ ಭೂಮಿಯ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇವೆ. ಅದಕ್ಕಾಗಿ ಕೊನೆಯವರೆಗೂ ಹೋರಾಟ ಮಾಡುತ್ತೇವೆ' ಎಂದು ಝೆಲೆನ್ಸ್ಕಿ ಗುಡುಗಿದ್ದಾರೆ.
ಕಳೆದ 6 ತಿಂಗಳ ಹಿಂದೆ ಉಕ್ರೇನ್ ಮೇಲೆ ಯುದ್ಧ ಸಾರಿದ ರಷ್ಯಾ ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿದೆ. ಉಕ್ರೇನ್‌ನ ಪ್ರತಿಹೋರಾಟದ ನಡುವೆ ಕೀವ್ ಸೇರಿದಂತೆ ಕೆಲ ನಗರಗಳು ಉಳಿದುಕೊಂಡಿದ್ದು, ರಷ್ಯಾ ಸೈನ್ಯ ಆಗಾಗ ಸಣ್ಣಪುಟ್ಟ ದಾಳಿ ಮಾಡುತ್ತಿವೆ.
ಚಾಪ್ಲಿನ್ ಎಂಬ ಸಣ್ಣ ನಗರದ ರೈಲ್ವೇ ನಿಲ್ದಾಣದ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದೆ. ಚಾಪ್ಲಿನ್ ದಾಳಿಯ ಹೊಣೆಯನ್ನು ರಷ್ಯಾ ಹೊರಬೇಕಿದೆ. ನಮ್ಮ ಜನರ ರಕ್ಷಣೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಆ ಬಳಿಕ ಉಕ್ರೇನ್ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ರದ್ದುಪಡಿಸಿದೆ.
PublicNext
25/08/2022 09:49 am