ನ್ಯೂಯಾರ್ಕ್: ಉಕ್ರೇನ್ ಮೇಲೆ ರಷ್ಯಾದ ದಾಳಿ ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಇಂದು (ಸೋಮವಾರ) 193 ಸದಸ್ಯರ ತುರ್ತು ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆದಿದೆ. ಆದರೆ ಈ ಅಧಿವೇಶನದಿಂದ ಭಾರತ ದೂರ ಸರಿದಿದೆ.
ಈ ವಿಚಾರವಾಗಿ ಉಕ್ರೇನ್ ಅಸಮಾಧಾನ ಹೊರ ಹಾಕಿದ್ದು, 'ನಿಮ್ಮ ಪ್ರಜೆಗಳ ಸುರಕ್ಷತೆಗಾಗಿ ನೀವು ಯುದ್ಧವನ್ನು ನಿಲ್ಲಿಸಲು ಮತ ಚಲಾಯಿಸಲೇಬೇಕು ಎಂದು ಒತ್ತಾಯಿಸಿದೆ. ಭಾರತವು ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಭಾರತದ ಪ್ರಜೆಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ವಿಚಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನಕ್ಕೆ ಭಾರತ ಶನಿವಾರ ಗೈರು ಹಾಜರಾಗಿತ್ತು. ನಿರೀಕ್ಷೆಯಂತೆ ಚೀನಾ ಕೂಡಾ ರಷ್ಯಾದ ವಿರುದ್ಧ ಮತದಾನದಿಂದ ದೂರ ಉಳಿದಿದೆ. ಆದರೆ ಬೆಲಾರಸ್ ಗಡಿಯಲ್ಲಿ ಮಾತುಕತೆ ನಡೆಸುವ ಮಾಸ್ಕೋ ಮತ್ತು ಕೀವ್‌ನ ನಿರ್ಧಾರವನ್ನು ನವದೆಹಲಿ ಸ್ವಾಗತಿಸಿದೆ.
ಅಧಿವೇಶನದಲ್ಲಿ 11 ಮತಗಳ ಪರವಾಗಿ ನಿರ್ಣಯವನ್ನು ಅಂಗೀಕರಿಸಲಾಯಿತು. ಭಾರತ, ಚೀನಾ ಮತ್ತು ಯುಎಇ ಮತದಾನದಿಂದ ದೂರ ಉಳಿದವು. ರಷ್ಯಾ ನಿರ್ಣಯದ ವಿರುದ್ಧ ಮತ ಚಲಾಯಿಸಿತು. 1950 ರಿಂದ ಇದು ಸಾಮಾನ್ಯ ಸಭೆಯ 11ನೇ ತುರ್ತು ಅಧಿವೇಶನವಾಗಿದೆ.
PublicNext
28/02/2022 04:02 pm