ಅಥಣಿ : ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣನವರ ಅವರು ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೆ ಮತ್ತಷ್ಟು ಪುಷ್ಟಿ ಸಿಗುವಂತಹ ಘಟನೆ ಅಥಣಿ ತಾಲೂಕಿನಲ್ಲಿ ನಡೆಯುತ್ತಿವೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರ ಕ್ಷೇತ್ರದಲ್ಲಿ ತೆರೆಮರೆ ಹಿಂದೆ ಕಮಿಷನ್ ದಂಧೆ ನಡೆಯುತ್ತಿದೆಯಾ ಎಂಬ ಗುಮಾನಿ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅದೇನು ಅಂತೀರಾ ಹಾಗಾದರೆ ನೋಡಿ ಈ ಸ್ಟೋರಿ...
ಬೆಳಗಾವಿ ಜಿಲ್ಲಾ ಪಂಚಾಯತಿ ಇಲಾಖೆಯಿಂದ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಅಥಣಿ ಪಟ್ಟಣದಿಂದ ಎಕನತ್ತಿಖೋಡಿ ರಸ್ತೆ (ಹಳೆ ಕಿರಣಗಿ ರಸ್ತೆ) ಸುಮಾರು 7 ಕಿಲೋ ಮೀಟರ್ ರಸ್ತೆ, ಕೈಯಿಂದ ಮುಟ್ಟಿದರೂ ಡಾಂಬರು ಕಿತ್ತು ಬರುತ್ತಿದ್ದು, ಇದು ಕಳಪೆ ಕಾಮಗಾರಿಯಾಗಿದೆ. ಇಲ್ಲಿನ ರಸ್ತೆಗೆ ನೆಪಕ್ಕೆ ಮಾತ್ರ ಒಂದಿಷ್ಟು ಜಲ್ಲಿ ಚೆಲ್ಲಿ, ಡಾಂಬರು ಹರಡಿ ಗುತ್ತಿಗೆದಾರ ಕೈಚೆಲ್ಲಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ಸುಮಾರು 74 ವರ್ಷಗಳ ನಂತರ ಡಾಂಬರೀಕರಣ ಹೊಂದಿದ ರಸ್ತೆ ಸಂಪೂರ್ಣವಾಗಿ ಕಳಪೆಯಾಗಿದೆ. ಒಂದೇ ವರ್ಷದಲ್ಲಿ ಅದೇ ರಸ್ತೆಯನ್ನು ಎರಡನೇ ಬಾರಿ ನಿರ್ಮಿಸಿದರೂ ಕೂಡ ಕಳಪೆಯಾಗಿದೆ, ನಮ್ಮ ಜನಪ್ರತಿನಿಧಿಗಳು ತಮ್ಮ ಬೆಂಬಲಿಗರಿಗೆ ಗುತ್ತಿಗೆ ನೀಡುತ್ತಿದ್ದಾರೆಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.
ನೆಪ ಮಾತ್ರಕ್ಕೆ ಕೆಲವರು ಗುತ್ತಿಗೆದಾರರಾಗಿದ್ದು, ಎಲ್ಲ ಕಾಮಗಾರಿಗಳನ್ನು ಚುನಾಯಿತ ಪ್ರತಿನಿಧಿಗಳ ಆಪ್ತರೇ ಮಾಡುತ್ತಾರೆ. ಅಥಣಿ ತಾಲೂಕಿನ ಬಹುತೇಕ ರಸ್ತೆ ಕಾಮಗಾರಿಗಳೆಲ್ಲವೂ ಯಾರದೋ ಗುತ್ತಿಗೆದಾರರ ಹೆಸರಿನಲ್ಲಿ ಪಡೆದು ಚುನಾಯಿತರ ಬೆಂಬಲಿಗರೇ ಮಾಡುತ್ತಿದ್ದಾರೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಕಳಪೆ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
-ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಸ್ಟ್, ಅಥಣಿ
PublicNext
31/08/2022 01:47 pm