ಗುಬ್ಬಿ : ಹೇಮಾವತಿ 24 ರ ಕೆ. ಜಿ ಟೆಂಪಲ್ ರಸ್ತೆಯಲ್ಲಿರುವ ಹೇಮಾವತಿ ನಾಲೆ ಕುಸಿತ ಕಂಡಿದ್ದು ಇಲ್ಲಿಂದ ನೀರು ಮುಂದುವರಿಯದೆ ಹೋದರೆ ಸುಮಾರು 55 ಗ್ರಾಮಗಳಿಗೆ ಮುಂದಿನ ದಿನದಲ್ಲಿ ಸಮಸ್ಯೆಯಾಗುತ್ತದೆ ಹಾಗಾಗಿ ಕೂಡಲೇ ಸರಕಾರ ಇದರ ಬಗ್ಗೆ ಕ್ರಮವಹಿಸಿ ನಾಲೆಯನ್ನು ಆಧುನೀಕರಣಗೊಳಿಸಬೇಕು ಎಂದು ರೈತರ ಒತ್ತಾಯ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ನಾಲೆಯು ಕುಸಿತ ಕಂಡಿದ್ದು ಇಲ್ಲಿಂದ ನೀರು ಹರಿಯದೆ ಇದ್ದರೆ ಬಿಟ್ಟು ಗೊಂಡನಹಳ್ಳಿ, ಮಂಚಿಹಳ್ಳಿ, ಹಿಂಡಿಸ್ಕೆರೆ, ಮಳೆ ಕಲ್ಲಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಈ ಕಾಲುವೆಯಿಂದ ಮುಂದಿನ ಭಾಗಕ್ಕೆ ನೀರು ಹರಿಯುವುದರಿಂದ ಸುಮಾರು 12000 ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಬಹುದಾಗಿದೆ ಹಾಗಾಗಿ ಸರಕಾರ ಕೂಡಲೇ ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ವ್ಯವಸ್ಥಿತವಾಗಿ ಹಾಗೂ ಶಾಶ್ವತವಾಗಿ ನಾಲೆಯನ್ನು ದುರಸ್ತಿ ಮಾಡಬೇಕೆಂದು ಒತ್ತಾಯ ಮಾಡಿದರು.
ಇತ್ತೀಚೆಗೆ ನೀರಾವರಿ ಸಚಿವರು ಗುಬ್ಬಿ ತಾಲೂಕಿಗೆ ಭೇಟಿ ನೀಡಿ ಇಡಕನಹಳ್ಳಿ ಗ್ರಾಮದ ಬಳಿ ನಾಲೆ ಕುಸಿದಿರುವುದಕ್ಕೆ ಹಣ ಹಾಕಿ ಸಿದ್ಧತೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಅದರಂತೆ ಇದನ್ನು ಸಹ ವೈಜ್ಞಾನಿಕವಾಗಿ ಸಿದ್ಧತೆ ಮಾಡಿದರೆ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತರ ಒಕ್ಕೊರಲಿನ ಅಭಿಪ್ರಾಯವಾಗಿದೆ.
ಈಗಾಗಲೇ ತಹಶೀಲ್ದಾರ್ ಬಿ. ಆರತಿ ಹಾಗೂ ತಾಂತ್ರಿಕ ಇಂಜಿನಿಯರ್ ಮಲ್ಲೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ರೈತರು ಕಾವೇರಿ ನೀರಾವರಿ ನಿಗಮದ ಎಂ. ಡಿ ಅವರಿಗೂ ಮನವಿ ಸಲ್ಲಿಸಿದ್ದೇವೆ. ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
=====
ವರದಿ ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್
=====
PublicNext
28/08/2022 11:25 am