ಭಿನ್ನ ವಿಭಿನ್ನವಾದ ಸಾಕಷ್ಟು ವಿಶಿಷ್ಟವಾಗಿ ನಿರ್ಮಾಣವಾದ ದೇವಾಲಯಗಳ ಬಗ್ಗೆ ಕೇಳಿರುತ್ತೇವೆ ನೋಡಿರುತ್ತೇವೆ. ಆದರೆ ಇಲ್ಲೊಂದು ದೇವಸ್ಥಾನದ ಬಗ್ಗೆ ನಾವು ನೀವೆಲ್ಲಾ ಕಂಡು ಕೇಳಿರಲು ಸಾಧ್ಯವಿಲ್ಲ ಎನ್ನಬಹುದು. ಹೌದು ತೆಲಂಗಾಣದಲ್ಲಿ 1800 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯವೊಂದು ಲೋಕಾರ್ಪಣೆಗೊಂಡಿದೆ. ಈ ಭವ್ಯವಾದ ಮಂದಿರ ನಿರ್ಮಾಣಕ್ಕೆ ಕೆಜಿಗಟ್ಟಲೆ ಚಿನ್ನ ಬಳಸಿದ್ದಾರೆ. ವಿಶೇಷವಾಗಿ ದೇವಸ್ಥಾನದ ದ್ವಾರವನ್ನು ಬರೋಬ್ಬರಿ 125 ಕೆಜಿ ಚಿನ್ನದಿಂದ ಅಲಂಕಾರ ಮಾಡಲಾಗಿದೆ.
ತೆಲಂಗಾಣದ ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಈ ದೇವಾಲಯ ತೆರೆಯುವ ಮುಹೂರ್ತವನ್ನು ಖುದ್ದು ಸಿಎಂ ಕೆಸಿ ಚಂದ್ರಶೇಖರ್ ರಾವ್ ಅವರ ಗುರೂಜಿ ಚಿನ್ನ ಜೀಯರ್ ಸ್ವಾಮೀಜಿ ಅವರೇ ನಿರ್ಧರಿಸಿದ್ದರು.
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವು ಹೈದರಾಬಾದ್ ನಿಂದ ಸುಮಾರು 80 ಕಿಮೀ ದೂರದಲ್ಲಿದೆ. ಈ ದೇವಾಲಯದ ಸಂಕೀರ್ಣವು 14.5 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದರ ಪುನ ನಿರ್ಮಾಣವು 2016 ರಲ್ಲಿ ಪ್ರಾರಂಭವಾಗಿತ್ತು. ಈ ಬೃಹತ್ ದೇವಾಲಯದ ಒಂದು ವಿಶೇಷತೆಯೆಂದರೆ, ಅದರ ಪುನರ್ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಬಳಸಿಲ್ಲ. ಬದಲಿಗೆ 2.5 ಲಕ್ಷ ಟನ್ ಗ್ರಾನೈಟ್ ಅನ್ನು ಆಂಧ್ರಪ್ರದೇಶದ ಪ್ರಕಾಶಂನಿಂದ ತರಲಾಗಿದೆ.
PublicNext
29/03/2022 12:10 pm