ಬೆಂಗಳೂರು: ಒಂದು ಕಡೆ ಮಳೆಗೆ ಕೆಸರುಗದ್ದೆಯಾದ ರಸ್ತೆ... ಮತ್ತೊಂದೆಡೆ ಅದೇ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಓಡಾಡುತ್ತಿರುವ ಸಾರ್ವಜನಿಕರು... ಇದ್ಯಾವುದೋ ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಖಂಡಿತ ಅಲ್ಲ. ಇದು ಬೆಂಗಳೂರು ಹೊರವಲಯದ ಆನೇಕಲ್ ನಿಂದ ಬನ್ನೇರುಘಟ್ಟ ಮೂಲಕ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗಳ ದುಸ್ಥಿತಿ.
ಪ್ರತಿ ಬಾರಿ ಮಳೆ ಬಂದರೆ ಇಲ್ಲಿ ರಸ್ತೆಗಳು ಕೆಸರುಗದ್ದೆಯಾಗಿ ಬದಲಾಗಿರುತ್ತೆ. ಇದಕ್ಕೆ ಕಾರಣ ಸುಮಾರು ವರ್ಷಗಳಿಂದ ಬನ್ನೇರುಘಟ್ಟ ರಸ್ತೆ ಕಾಮಗಾರಿ ವಿಳಂಬವಾಗ್ತಾಯಿದ್ದು, ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡದೇ ಇರುವುದು. ಬಹಳ ಮುಖ್ಯವಾಗಿ ಜಿಗಣಿ ಯಿಂದ ಜಂಗಲ್ ಪಾಳ್ಯ ರಾಗಿಹಳ್ಳಿ ವರೆಗೆ ಇಲ್ಲಿನ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡದೇ ಅವೈಜ್ಞಾನಿಕವಾಗಿ ರಸ್ತೆಗಳನ್ನು ನಿರ್ಮಾಣ ಮಾಡಲು ಮುಂದಾಗಿರುವುದು.
ಎಲ್ಲೆಂದರಲ್ಲಿ ರಸ್ತೆ ಅಗೆದು, ಸರಿಯಾಗಿ ಮುಚ್ಚದೇ ಬೇಜವಾಬ್ದಾರಿಯಿಂದ ಕಾಮಗಾರಿ ನಡೆಸಲಾಗುತ್ತಿದೆ. ಹೀಗಾಗಿ ಮಳೆ ಬಂದಾಗ ಆ ಮಣ್ಣು ರಸ್ತೆಗೆ ಬಂದು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಅಂಗ ಊನರಾಗುತ್ತಿದ್ದಾರೆ. ಪಾದಚಾರಿಗಳೂ ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆಗೆ ಸೇರಿರುವ ಅದೆಷ್ಟೋ ಉದಾಹರಣೆಗಳಿವೆ. ಹೀಗಾಗಿ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ದ ಸಂಚಾರಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಕಳೆದ ಮೂರು ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯುತ್ತಲೇ ಇದ್ದು, ಇನ್ನು ಅರ್ಧದಷ್ಟು ಕಾಮಗಾರಿ ಸಹ ಆಗಿಲ್ಲ.
ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ಕಡೆಗೆ ಬರುವುದೇ ಕಷ್ಟವಾಗಿದೆ. ಜೊತೆಗೆ ಹೆಲ್ಮೆಟ್, ಮಾಸ್ಕ್ ಎಂದು ಜನರ ಬಳಿ ಸುಲಿಗೆ ಮಾಡುವ ಸರಕಾರ, ಇಂತಹ ವಿಷಯ ಕುರಿತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
PublicNext
29/11/2021 05:18 pm