ನವದೆಹಲಿ: ದೆಹಲಿ ವಿಧಾನಸಭೆ ಒಳಗಡೆ ಪತ್ತೆಯಾಗಿರುವ ರಹಸ್ಯ ಸುರಂಗ ಮಾರ್ಗವೊಂದು ಚಾಂದಿನಿ ಚೌಕದಲ್ಲಿರುವ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುತ್ತದೆ. ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಈ ಸುರಂಗ ಮಾರ್ಗವನ್ನು ಬ್ರಿಟಿಷರು ನಿರ್ಮಿಸಿದ್ದರು, ಅಂದು ಸ್ವಾತಂತ್ರ್ಯ ಹೋರಾಟಗಾರರನ್ನು ಕರೆದೊಯ್ಯುವಾಗ ಯಾವುದೇ ಪ್ರತಿರೋಧ, ಪ್ರತೀಕಾರದ ಘಟನೆ ನಡೆಯದಂತೆ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ರಹಸ್ಯ ಮಾರ್ಗವನ್ನು ಬ್ರಿಟಿಷರು ಉಪಯೋಗಿಸುತ್ತಿದ್ದರು ಎಂದು ವರದಿ ವಿವರಿಸಿದೆ.
“1993ರಲ್ಲಿ ಶಾಸಕನಾದ ಮೇಲೆ, ದೆಹಲಿ ವಿಧಾನಸಭೆಯೊಳಗೆ ಕೆಂಪುಕೋಟೆಯವರೆಗೆ ತಲುಪಲು ರಹಸ್ಯ ಸುರಂಗ ಮಾರ್ಗವೊಂದು ಇದೆ ಎಂಬ ಬಗ್ಗೆ ಸುದ್ದಿ ಕೇಳಿದ್ದೆ. ನಾನು ಕೂಡಾ ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಏನಾದರು ಮಾಹಿತಿ ಲಭ್ಯವಾಗುತ್ತದೆಯೋ ಎಂದು ಪರಿಶೀಲಿಸಿದ್ದೆ. ಆದರೆ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲವಾಗಿತ್ತು ಎಂದು ಸ್ಪೀಕರ್ ಗೋಯೆಲ್ ತಿಳಿಸಿದ್ದಾರೆ.
ಸದ್ಯ ನಮಗೆ ಸುರಂಗ ಮಾರ್ಗವನ್ನು ಅಗೆಯಲು ಸಾಧ್ಯವಿಲ್ಲ, ಯಾಕೆಂದರೆ ಸುರಂಗ ಮಾರ್ಗದ ಎಲ್ಲಾ ಹಾದಿ ಮೆಟ್ರೋ ಯೋಜನೆಯಿಂದ ನಾಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ ವಿಧಾನಸಭೆ ಕಟ್ಟಡದಲ್ಲಿ 1912ರಲ್ಲಿ ಬ್ರಿಟಿಷರು ಕೋಲ್ಕತಾದಿಂದ ಕೇಂದ್ರ ಶಾಸಕಾಂಗ ಕಚೇರಿಯನ್ನು ಇಲ್ಲಿಗೆ ಸ್ಥಳಾಂತರಿಸಿದ್ದರು. ನಂತರ 1926ರಲ್ಲಿ ಕೋರ್ಟ್ ಆಗಿ ಪರಿವರ್ತಿಸಿದ್ದರು. ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಕೋರ್ಟ್ ಗೆ ಹಾಜರುಪಡಿಸಲು ಬ್ರಿಟಿಷರು ಈ ರಹಸ್ಯ ಸುರಂಗ ಮಾರ್ಗವನ್ನು ಬಳಸುತ್ತಿದ್ದರು.
PublicNext
03/09/2021 03:54 pm