ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ಕೃಷಿ ಹೊಂಡಗಳ ಮೂಲಕ ಮಳೆ ನೀರಿನ ಸಂಗ್ರಹ ಹಾಗೂ ನಿರ್ವಹಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುತ್ತಿರುವ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ಗುರುವಾರ ಹಮ್ಮಿಕೊಂಡಿದ್ದ '' ಗ್ರಾಮೀಣ ಅಭ್ಯುದಯಕ್ಕಾಗಿ ಜಲಾಂದೋಲನ '' ಕುರಿತ ವೆಬಿನಾರ್ ಅನೇಕ ಮಹತ್ವದ ವಿಷಯಗಳ ಮೇಲೆ ಬೆಳಕು ಚೆಲ್ಲಿತು.
ಫೌಂಡೇಶನ್ ಸಂಸ್ಥಾಪಕ ಗುರುರಾಜ್ ದೇಶಪಾಂಡೆ ಸಂವಾದ ನಿರ್ವಹಿಸಿದರೆ , ಖ್ಯಾತ ನಟ ಅಮೀರ್ ಖಾನ, ಅವರ ಪತ್ನಿ ಮತ್ತು ಮಹಾರಾಷ್ಟ್ರದ ಪಾನಿ ಫೌಂಡೇಶನ್ ಸಂಸ್ಥಾಪಕಿ ಕಿರಣ್ ರಾವ್ ಹಾಗೂ ಸಿಇಒ ಸತ್ಯಜೀತ್ ಭಟ್ಕಳ್ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅನುಭವ ಹಂಚಿಕೊಂಡರು. ಪಾನಿ ಫೌಂಡೇಶನ್ ಮಹಾರಾಷ್ಟ್ರದ ಕ್ಷಾಮ ಪೀಡಿತ ಗ್ರಾಮಗಳಲ್ಲಿ ಜಲಕ್ರಾಂತಿಯನ್ನೇ ಮಾಡಿದೆ ಎಂದು ಹೇಳಬಹುದು.
ಮಹಾರಾಷ್ಟ್ರದ ಸುಮಾರು 86 ಸಾವಿರ ಗ್ರಾಮಗಳು ಜಲಕ್ಷಾಮದಿಂದ ತತ್ತರಿಸುತ್ತಿವೆ.ಪ್ರಾಯೋಗಿಕವಾಗಿ ಕಳೆದ ನಾಲ್ಕು ವರ್ಷಗಳಿಂದ ಸುಮಾರು ಐದು ಸಾವಿರ ಗ್ರಾಮಗಳಲ್ಲಿ ಮಳೆನೀರು ಸಂಗ್ರಹಣೆ ಹಾಗೂ ನಿರ್ವಹಣೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾವು ಅವರಿಗೆ ಹಣ ಅಥವಾ ಯಂತ್ರೋಪಕರಣ ನೀಡಲಿಲ್ಲ ಬದಲಾಗಿ ಸಂಪನ್ಮೂಲ ಸದ್ಬಳಕೆ ಕುರಿತು ಅರಿವು ಮೂಡಿಸಿದೆವು ಎಂದು ಅಮೀರ್ ಹೇಳಿದರು.
ಜನರು ಸ್ವಯಂ ಪ್ರೇರಿತರಾಗಿ ಈ ಜಲಾಂದೋಲನದಲ್ಲಿ ಭಾಗವಹಿಸಿದರೆ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ. ತಮ್ಮ ಸಂಸ್ಥೆ ಕಾರ್ಯಗಳಿಂದ ಸ್ಫೂರ್ತಿಯಾದ ಜನ ನಮ್ಮ ಜಲಮಿತ್ರ ಯೋಜನೆಗೆ ಸಾಥ್ ನೀಡಿದರು. ಹೀಗಾಗಿ ಅದು ನಿರಂತವಾಗಿ ಮುಂದುವರಿದೆ ಎಂದು ಕಿರಣ್ ರಾವ್ ಹೇಳಿದರು.
ಸಂವಾದ ನಿರ್ವಹಿಸಿ ಡಾ: ಗುರುರಾಜ್ ದೇಶಪಾಂಡೆ ಅವರ ಅನುಭವ ಹಾಗೂ ಅವರು ಬಿಚ್ಚಿಟ್ಟ ಕೆಲವು ಮಹತ್ವದ ವಿಷಯಗಳಿಂದ ಸ್ವತಃ ಅಮೀರ್ ಖಾನ್ ಆಶ್ಚರ್ಯ ಚಕಿತರಾದರು. " ನನ್ನ ತಂತ್ರಜ್ಞಾನದ ಹಸಿವನ್ನು ಹಿಂಗಿಸಿದ್ದೇ ನಿಮ್ಮ ಮುತ್ತಾತ ಅಬುಲ್ ಕಲಾಂ ಆಜಾದ್ ಸ್ಥಾಪಿಸಿದ್ದ ಮದ್ರಾಸ್ ಐಐಟಿ '' . ಅದೇ ಡಿಎನ್ಎ ಕಾರಣ ಲಗಾನ್ ದಂತಹ ಸಾಮಾಜಿಕ ಕಳಕಳಿ ಚಿತ್ರ ನಿರ್ಮಾಣ ಮಾಡುತ್ತಿದ್ದೀರಿ '' ಎಂದು ದೇಶಪಾಂಡೆ ಅವರು ಹೇಳಿದಾಗ ಅಮೀರ್ ದಂಪತಿ ದಿಗ್ಮೂಢರಾದರು.
ಧಾರವಾಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಜಲಾಂದೋಲನ ರೂಪಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ " ಗ್ರಾಮೀಣ ತಂತ್ರಜ್ಞಾನ ಮಿಶನ್ " ಸ್ಥಾಪಿಸಲಾಗುತ್ತಿದ್ದು ಇದರಡಿಯಲ್ಲಿ 100.000 ಕೃಷಿ ಹೊಂಡ ನಿರ್ಮಿಸಲಾಗುತ್ತದೆ. 800 ಕೋಟಿ ರೂ ಈ ಬೃಹತ್ ಯೋಜನೆ ಸಾಕಾರಕ್ಕೆ ಭಾರತೀಯ SBI, HDFC ಹಾಗೂ ನಬಾರ್ಡ ಕೈ ಜೋಡಿಸಿವೆ.
ಶೀಘ್ರದಲ್ಲಿಯೇ ಮಿಶನ್ ಕಾರ್ಯಾರಂಭ ಮಾಡಲಿದ್ದು ಇದರೊಂದಿಗೆ ತಾವೂ ತಂತ್ರಜ್ಞಾನ ಹಾಗೂ ಇನ್ನಿತರ ಮಾಹಿತಿ ಹಂಚಿಕೊಳ್ಳಬಹುದಾಗಿದೆ ಎಂದು ದೇಶ್ ಹೇಳಿದಾಗ ಅಮೀರ್ ದಂಪತಿ ಅದಕ್ಕೆ ಸಮ್ಮತಿಸಿದರು.
ಅಮೀರ್ ದಂಪತಿ ಆಂದೋಲನಕ್ಕೆ ಜೊತೆಯಾದವರು ಪಾನಿ ಫೌಂಡೇಶನ್ ಸಿಇಒ ಸತ್ಯಜೀತ್ ಭಟ್ಕಳ್. ಇವರು ಅಮೀರ್ ಅವರ " ಸತ್ಯಮೇವ್ ಜಯತೆ ಯಶಸ್ವಿ ಕಾರ್ಯಕ್ರಮದ 25 ಹೆಚ್ಚು ಎಪಿಸೋಡ್ ಗೆ ಸ್ಫೂರ್ತಿದಾಯಕ ಸ್ಕ್ರಿಪ್ಟ್ ನೀಡಿದವರು.
ಈ ಆಂದೋಲನದಲ್ಲಿ ಹಳ್ಳಿಯ ಎಲ್ಲ ಜನರೂ ಭಾಗವಹಿಸಬೇಕೆಂದೇನಿಲ್ಲ. ನಾಯಕತ್ವ ಗುಣವುಳ್ಳ ಐವರು ಬಂದರೆ ಸಾಕು. ನಾವು ಅವರಿಗೆ ತರಬೇತಿ ನೀಡಿ ಅವರ ಮೂಲಕ ಜನರನ್ನು ಪ್ರೋತ್ಸಾಹಿಸಬಹುದು ತಮ್ಮ ಅನುಭವ ಹಂಚಿಕೊಂಡರು.
ಸುಮಾರು 1 ಗಂಟೆ 43 ನಿಮಿಷಗಳ ಈ ವೆಬಿನಾರ್, ಜಲನಿರ್ವಹಣೆ ಯೋಜನೆ ರೂಪಿಸುವವರು ಹಾಗೂ ಅನುಷ್ಠಾನಗೊಳಿಸುವ ಸಂಸ್ಥೆಗಳಿಗೆ ಮಾಹಿತಿ ಕಣಜವಾಯಿತು.
PublicNext
12/02/2021 10:52 am