ದೇಶದ ಹೆಣ್ಣು ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ ಜನೆವರಿ 2015 ರಲ್ಲಿ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು (Sukanya Samriddhi Yojana) ಆರಂಭಿಸಿದೆ. ಇದು ಹೆಣ್ಣು ಮಕ್ಕಳ ಹೆಸರಲ್ಲಿ ತೆರೆಯಲಾಗುವ ಸಣ್ಣ ಉಳಿತಾಯ ಯೋಜನೆ ಖಾತೆ.
ಹೆಣ್ಣು ಮಕ್ಕಳು ಕುಟುಂಬಕ್ಕೆ ಹೊರೆಯೆನ್ನುವ ತಪ್ಪು ಆಲೋಚನೆಗೆ ಅಂತ್ಯ ಹಾಡಲು ಇಂತಹ ಪ್ರಯತ್ನಗಳನ್ನಾ ಮಾಡುತ್ತಿದೆ ಸರ್ಕಾರ
(Sukanya Samriddhi Yojana) ಕಳೆದ ಕೆಲ ವರ್ಷಗಳಿಂದೀಚೆಗೆ ಜನಪ್ರಿಯವಾಗಿರುವ ಈ ಯೋಜನೆ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಭದ್ರತೆ ಒದಗಿಸುವ ಉದ್ದೇಶ ಹೊಂದಿದೆ.
ಆದರೆ, ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವಾಲಯ ಈ ಯೋಜನೆಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ತಂದಿದೆ. ಸದ್ಯ ಶೇ.7.6ರಷ್ಟು ವಾರ್ಷಿಕ ಬಡ್ಡಿ ದರವನ್ನು ಒದಗಿಸುತ್ತಿರುವ ಈ ಯೋಜನೆ, ತೆರಿಗೆ ರಿಯಾಯಿತಿಯನ್ನೂ ಹೊಂದಿದೆ. ಕೇವಲ ಅಂಚೆ ಕಚೇರಿಯಲ್ಲಷ್ಟೇ ಅಲ್ಲದೇ ಖಾಸಗಿ ಬ್ಯಾಂಕ್ ಗಳಲ್ಲೂ ಈ ಯೋಜನೆ ಲಭ್ಯವಿದ್ದು, ನಿಮ್ಮ ಮಗಳಿಗೆ 14 ವರ್ಷ ತುಂಬುವ ತನಕ ಹಣ ಹೂಡಿಕೆ ಮಾಡಿದರೆ 21 ವರ್ಷ ಮುಗಿಯುವ ವೇಳೆಗೆ ಹಣ ನಿಮ್ಮ ಕೈ ಸೇರಲಿದೆ.
ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯುವುದು ಹೇಗೆ?
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿಸಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಬೇಕು. ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ ಯಾವುದಾದರೂ ಗುರುತಿನ ಚೀಟಿ, (PAN, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್), ವಿಳಾಸದ ಗುರುತನ್ನು ಸಲ್ಲಿಸುವ ಮೂಲಕ ಖಾತೆಯನ್ನು ತೆರೆಯಬಹುದಾಗಿದೆ. ಖಾತೆ ತೆರೆದ ಬಳಿಕ ನಿಮಗೊಂದು ಪಾಸ್ಬುಕ್ ದೊರೆಯಲಿದ್ದು, ಕನಿಷ್ಠ ₹250ರಿಂದ ಗರಿಷ್ಠ ₹1.50 ಲಕ್ಷವನ್ನು ವಾರ್ಷಿಕ ಈ ಯೋಜನೆಯಲ್ಲಿ ಕಟ್ಟಬಹುದಾಗಿದೆ.
ಈ ಮೊದಲು ಹೆಣ್ಣು ಮಗುವಿಗೆ 10 ವರ್ಷವಾಗುತ್ತಿದ್ದಂತೆಯೇ ಖಾತೆ ನಿರ್ವಹಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ ಈಗ 18 ವರ್ಷ ತುಂಬಿದ ನಂತರವಷ್ಟೇ ಖಾತೆ ನಿರ್ವಹಣೆ ಮಾಡಬಹುದಾಗಿದೆ. ಜೊತೆಗೆ ಲಾಕ್ ಡೌನ್ ಕಾರಣದಿಂದ ಕಳೆದ ಬಾರಿ 10 ವರ್ಷದೊಳಗೆ ಖಾತೆ ತೆರೆಯಲಾಗದಿದ್ದವರಿಗೆ ಇನ್ನೊಂದು ಅವಕಾಶವನ್ನೂ ನೀಡಲಾಗಿದೆ.
ಈ ಖಾತೆಗೆ ಸತತ 14 ವರ್ಷ ಹಣ ತುಂಬಬೇಕಿದ್ದು, 18 ವರ್ಷ ತುಂಬಿದ ನಂತರ ಅವಶ್ಯಕತೆಗನುಗುಣವಾಗಿ ಹಣ ಪಡೆಯುವ ಅವಕಾಶವಿದೆ. 21 ವರ್ಷ ತುಂಬಿದ ನಂತರ ಖಾತೆಯನ್ನು ಮುಚ್ಚಬಹುದಾಗಿದೆ. ಹೆಣ್ಣು ಹೆತ್ತವರಿಗೆ ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ಬಡ್ಡಿದರವೂ ಚೆನ್ನಾಗಿರುವ ಕಾರಣ ಸದ್ಭಳಕೆ ಮಾಡಿಕೊಳ್ಳಬಹುದಾಗಿದೆ.
PublicNext
07/02/2021 08:08 am