ಬೆಂಗಳೂರು: ಮರಗಳನ್ನು ಉಳಿಸಲು ಸರ್ಕಾರಿ ಶಾಲೆ ಮಕ್ಕಳು ಹೋರಾಟಕ್ಕೆ ಮುಂದಾಗಿದ್ದಾರೆ. ಚಿಪ್ಕೋ ಚಳವಳಿ ಮಾದರಿಯಲ್ಲಿ ತಮ್ಮ ಶಾಲೆಯ ಆವರಣದಲ್ಲಿನ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ ಬಿಬಿಎಂಪಿ ಮರಗಳನ್ನು ಕಡಿಯಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಪೀಣ್ಯ ದಾಸರಹಳ್ಳಿಯ ಅಬ್ಬಿಗೆರೆ ಸರ್ಕಾರಿ ಶಾಲಾ ಮಕ್ಕಳು ಕೈಯಲ್ಲಿ ನಾಮಫಲಕಗಳನ್ನು ಹಿಡಿದು, ಮರಗಳನ್ನು ಸುತ್ತುವರಿದು ತಬ್ಬಿಕೊಂಡು ಕಡಿಯದಂತೆ ಶಾಲಾ ಆವರಣದಲ್ಲಿ ಮನವಿ ಮಾಡಿ, ಪ್ರತಿಭಟನೆ ನಡೆಸಿದ್ದಾರೆ.
ಅಬ್ಬಿಗೆರೆ ಸರ್ಕಾರಿ ಶಾಲೆ ಆವರಣದಲ್ಲಿರುವ ಮೈದಾನದಲ್ಲಿ 100ಕ್ಕೂ ಹೆಚ್ಚು ಮರಗಳಿವೆ. ಅಬ್ಬಿಗೆರೆಯಿಂದ ಚಿಕ್ಕಬಾಣಾವರಕ್ಕೆ ಸಂಪರ್ಕಿಸುವ ಮುಖ್ಯರಸ್ತೆಯನ್ನು ಅಗಲೀಕರಣ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಅಗಲೀಕರಣ ಅವೈಜ್ಞಾನಿಕವಾಗಿದ್ದು ಯಾವುದೇ ಕಾರಣಕ್ಕೂ ಮುಂದುವರೆಸದಂತೆ ಪ್ರತಿಭಟನೆ ಮಾಡಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಮನವಿ ಸಲ್ಲಿಸಲು ಶಾಲಾ ಮಕ್ಕಳು ಮುಂದಾಗಿದ್ದಾರೆ.
PublicNext
09/09/2021 04:22 pm