ಚಿತ್ರದುರ್ಗ: ಈ ಶಾಲೆ ಶತಮಾನ ಕಂಡಿದ್ದು, ಇದೀಗ ಶಾಲಾ ಕೊಠಡಿಗಳು ದುರಸ್ಥಿ ತಲುಪಿರುವುದರಿಂದ ಮಕ್ಕಳಿಗೆ ಬೋಧನಾ ಕೊಠಡಿಗಳಿಲ್ಲದೇ ಮರದ ನೆರಳಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಸರ್ಕಾರಿ ಪ್ರಾಥಮಿಕ ಶಾಲೆಯ ಈ ಮಕ್ಕಳದ್ದು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಓಬಳಾಪುರ ಸಮೀಪದ ಸಿರಿವಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಥ ಅವ್ಯವಸ್ಥೆಯ ಆಗರ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರ ಕ್ಷೇತ್ರದಲ್ಲಿ ಎದ್ದು ಕಾಣುತ್ತಿದೆ.
ಚಳ್ಳಕೆರೆ ನಗರದಿಂದ ಸುಮಾರು 42 ಕೀಲೋ ಮೀಟರ್ ದೂರದಲ್ಲಿರುವ ಹಾಗೂ ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಈ ಸರಿವಾಳ ಗ್ರಾಮದಲ್ಲಿ 1 ರಿಂದ 8 ನೇ ತರಗತಿಯ 270 ವಿದ್ಯಾರ್ಥಿಗಳಿದ್ದಾರೆ. ಮಕ್ಕಳಿಗೆ ಸರಿಯಾದ ಬೋಧನಾ ಕೊಠಡಿಳಿಲ್ಲದೆ ಬಯಲಲ್ಲೇ ಕುಳಿತು ಪಾಠ ಕೇಳುತ್ತಿರುವ ದೃಶ್ಯ ಇದಾಗಿದೆ.ಶಾಲೆ ನೂರು ವರ್ಷ ದಾಟಿದ್ದು ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿವೆ. ಕೊಠಡಿಯ ಮೇಲ್ಚಾವಣಿಯ ಹೆಂಚುಗಳು ಹಾರಿ ಹೋಗಿ, ಮುರಿದು ಬಿದ್ದಿವೆ. ಗೋಡೆ ಕುಸಿದಿವೆ. ಕುಳಿತು ಕೊಳ್ಳಲು ಸರಿಯಾದ ಡೆಸ್ಕ್ ಗಳಿಲ್ಲ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಶಾಲಾ ಆಡಳಿತ ಹಾಗೂ ಗ್ರಾಮಸ್ಥರು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
PublicNext
26/10/2021 07:12 pm