ಸುಳ್ಯ: ಸಾಮಾನ್ಯವಾಗಿ ಸಂಘ ಸಂಸ್ಥೆಗಳು, ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡುವುದನ್ನು ಅನೇಕ ಬಾರಿ ನೋಡಿದ್ದೇವೆ, ಕೇಳಿದ್ದೇವೆ. ಆದರೆ, ಪುಟಾಣಿಗಳಿಬ್ಬರು ಶಾಲೆಗೆ ಹೋಗಲು ಕೆಸರು ತುಂಬಿದ ರಸ್ತೆಯನ್ನು ಸರಿ ಪಡಿಸುವ ಮೂಲಕ ಸುದ್ದಿಯಾಗಿದ್ದು, ಸದ್ಯ ಚಿತ್ರವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಬೆಳ್ಳಾರೆ ಗ್ರಾಮದ ಮೂಡಾಯಿತೋಟ – ಬೆಳ್ಳಾರೆ ರಸ್ತೆಯ ಮಂಡೇಪು ಎಂಬಲ್ಲಿ ಮಣ್ಣಿನ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗಿದ್ದು, ಸ್ಥಳೀಯ ನಿವಾಸಿ ಸಂತೋಷ್ ಮತ್ತು ಕೇಶವ ಎಂಬವರ ಮಕ್ಕಳಾದ 2ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ಅವರು ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸರನ್ನು ಬದಿಗೆ ಸರಿಸಿ ಗುಂಡಿಯಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದಾರೆ.
ಚಿಕ್ಕ ಮಕ್ಕಳಿಗೆ ಪ್ರಾಥಮಿಕ ಶಾಲಾ ತರಗತಿ ಅ.25 ರಂದು ಆರಂಭವಾಗಿದ್ದು,ಈ ನಡುವೆ ಇಬ್ಬರು ಪುಟಾಣಿಗಳು ತಾವು ದಿನನಿತ್ಯ ಸಾಗಬೇಕಾದ ರಸ್ತೆಯನ್ನು ತಾವೇ ದುರಸ್ತಿ ಪಡಿಸುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಮಾಹಿತಿ ಪಡೆದ ಸುಳ್ಯ ಸಿವಿಲ್ ಕೋರ್ಟ್ ನ್ಯಾಯಾಧೀಶ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ, ಮಕ್ಕಳ ಕೈಯಲ್ಲಿ ಹಾರೆ ಹಿಡಿಸಿದ ಪೋಷಕರನ್ನು ಪ್ರಶ್ನಿಸಿದ್ದು, ಹಲವು ಬಾರಿ ಪಂಚಾಯಿತಿಗೆ ಮನವಿ ನೀಡಿದರೂ ರಸ್ತೆ ಸರಿಯಾಗದ ಹಿನ್ನೆಲೆಯಲ್ಲಿ ನಾವೇ ಶ್ರಮದಾನ ಮಾಡುತ್ತಿದ್ದೆವು. ಈ ಸಂದರ್ಭ ಮಕ್ಕಳೂ ಹಾರೆ ಹಿಡಿದಿದ್ದಾರೆ ಎಂದು ಪೊಷಕರು ನ್ಯಾಯಾಧೀಶರಲ್ಲಿ ಹೇಳಿದ್ದಾರೆ. ಕೂಡಲೇ ರಸ್ತೆ ಸರಿಪಡಿಸುವಂತೆ ಪಂಚಾಯಿತಿಗೆ ಈ ವೇಳೆ ಜಡ್ಜ್ ತಾಕೀತು ಮಾಡಿದ್ದಾರೆ.
PublicNext
25/10/2021 10:06 pm