ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಇಂದು ರೈತರು ನೀಡಿರುವ ಭಾರತ ಬಂದ್ ಗೆ ದೆಹಲಿ ಟ್ರಾಫಿಕ್ ಸಮಸ್ಯೆಯಿಂದ ತತ್ತರಿಸಿ ಹೋಗಿದೆ. ಇಂದು ಬೆಳಿಗ್ಗೆಯಿಂದಲೇ ದೆಹಲಿಯ ಗಡಿಭಾಗಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್ ಜ್ಯಾಮ್ ಗಳು ಏರ್ಪಟ್ಟಿರುವುದು ವರದಿಯಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ ವೇದಿಕೆಯಡಿ 40 ರೈತ ಸಂಘಟನೆಗಳು ಒಟ್ಟಾಗಿ, ಇಂದು ಬೆಳಿಗ್ಗೆ 6 ರಿಂದ ಸಂಜೆ 4 ರವರೆಗೆ ಬಂದ್ ಗೆ ಕರೆ ನೀಡಿವೆ. ಸರ್ಕಾರಿ ಕಛೇರಿಗಳು, ಶಾಲೆ-ಕಾಲೇಜು, ವ್ಯಾಪಾರ-ವಹಿವಾಟುಗಳನ್ನು ನಡೆಸದಂತೆ ಆಗ್ರಹಿಸಿವೆ. ವಿವಾದಿತ ಕಾನೂನುಗಳನ್ನು ಅನುಷ್ಠಾನಗೊಳಿಸಿದರೆ, ಕೃಷಿ ಕ್ಷೇತ್ರವನ್ನು ಖಾಸಗಿ ಕಂಪೆನಿಗಳ ಹಿಡಿತಕ್ಕೆ ಒಳಗಾಗಲಿವೆ ಎಂಬುದು ಪ್ರತಿಭಟನಾಕಾರರ ವಾದವಾಗಿದೆ.
ಇಂದು ಬೆಳಿಗ್ಗೆಯಿಂದಲೇ, ಮುಖ್ಯವಾಗಿ ರೈತರ ಪ್ರತಿಭಟನಾ ಧರಣಿ ನಡೆಯುತ್ತಿರುವ ಘಾಜಿಪುರ ಗಡಿ ಬಳಿಯ ದೆಹಲಿ-ಮೀರತ್ ಎಕ್ಸ್ ಪ್ರೆಸ್ವೇ ಬ್ಲಾಕ್ ಆಗಿತ್ತು. ದೆಹಲಿಯ ಗುರ್ ಗಾವ್ ಮತ್ತು ನಾಯ್ಡ ಗಡಿಗಳಲ್ಲಿಯೂ ಭಾರೀ ಜ್ಯಾಮ್ ಕಂಡುಬಂದಿದ್ದು, ವಾಹನಗಳ ಸಾಲು ರಸ್ತೆಗಳನ್ನು ಆವರಿಸಿವೆ. ಪಂಜಾಬ್ ಮತ್ತು ಹರಿಯಾಣದ ಕಡೆಗಿನ ಶಂಭು ಗಡಿ ಕೂಡ ಬ್ಲಾಕ್ ಆಗಿದೆ ಎನ್ನಲಾಗಿದೆ.
ಹಲವು ವ್ಯಾಪಾರಿ ಸಂಘಟನೆಗಳು ಬಂದ್ ಗೆ ಕೇವಲ ಸೈದ್ಧಾಂತಿಕ ಬೆಂಬಲವನ್ನು ಮಾತ್ರ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು, ಮುನ್ನೆಚ್ಚರಿಕೆಯಾಗಿ ನಗರದ ಮತ್ತು ವಿವಿಧೆಡೆಯ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಕೆಲವು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಧರಣಿ ಸೇರಿದಂತೆ ಶಾಂತ ಪ್ರತಿಭಟನೆ ನಡೆಸುವುದಾಗಿ ರೈತಮುಖಂಡರು ಹೇಳಿದ್ದಾರೆ.
PublicNext
27/09/2021 12:52 pm