ದಾವಣಗೆರೆ: ಹರಿಹರ ತಾಲೂಕಿನ ಮಲೆಬೆನ್ನೂರು ಬಳಿಯ ಉಕ್ಕಡಗಾತ್ರಿಯ ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಲು ಇಳಿದಿದ್ದ ಸಹೋದರಿಯರು ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ವೀರಾಚಾರಿ ಎಂಬುವವರ ಮಕ್ಕಳಾದ ಚೈತ್ರಾ ಹಾಗೂ ಪುಷ್ಪಾ ನಾಪತ್ತೆಯಾದವರು. ಚೈತ್ರಾ ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದ ಕಾರ್ತಿಕ್ ಅವರ ಜೊತೆ ಮದುವೆಯಾಗಿತ್ತು. ದಾವಣಗೆರೆಯ ಕಾಲೇಜೊಂದರಲ್ಲಿ ಪುಷ್ಪಾ ಓದುತ್ತಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಚೈತ್ರಾ ಹಾಗೂ ಪುಷ್ಪಾ ಬದುಕಿರುವ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಲಾಗಿದೆ.
ಕುಟುಂಬ ಸಮೇತ ಉಕ್ಕಡಗಾತ್ರಿಯ ಸುಕ್ಷೇತ್ರಕ್ಕೆ ಕರಿಬಸವೇಶ್ವರ ಸ್ವಾಮಿ ದರ್ಶನಕ್ಕೆ ಬಂದಿದ್ದರು. ಯಾತ್ರಾರ್ಥಿಗಳು ಸ್ನಾನಮಾಡಲು ನದಿಗೆ ಇಳಿದಿದ್ದಾರೆ. ಈ ವೇಳೆ ನೀರಿನ ಸೆಳವಿನ ರಭಸಕ್ಕೆ ಸಿಕ್ಕಿಹಾಕಿಕೊಂಡು ಮುಳುಗಿದ್ದಾರೆ. ಈ ವೇಳೆ ಅಕ್ಕಪಕ್ಕದಲ್ಲಿದ್ದವರು ಎಷ್ಟೇ ಪ್ರಯತ್ನಿಸಿದರೂ ಮೇಲಕ್ಕೆ ತರಲಾಗಲಿಲ್ಲ. ಕಣ್ಮರೆಯಾದವರಿಗೆ ಹುಡುಕಾಟ ಮುಂದುವರಿದಿದೆ. ಅಗ್ನಿಶಾಮದ ದಳ ಸಿಬ್ಬಂದಿ ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
PublicNext
05/09/2022 05:07 pm