ಮಂಡ್ಯ: ಅವರು ಖರೀದಿಸಿದ್ದು ರಾಗಿ ಆದ್ರೆ ಆ ಚೀಲದಲ್ಲಿ ರಾಗಿ ಜೊತೆಗೆ ಚಿನ್ನವು ಸಿಕ್ಕಿದೆ. ಇನ್ನು ಚಿನ್ನ ಸಿಕ್ಕಿತೆಂದು ಹಬ್ಬ ಮಾಡುವ ಈ ಕಾಲದಲ್ಲಿ ರಾಗಿ ಕೊಂಡವರು ಚಿನ್ನವನ್ನು ಮಾಲೀಕರಿಗೆ ಮರಳಿ ನೀಡಿದ ಪ್ರಾಮಾಣಿಕತೆಯ ಪ್ರಸಂಗ ಮಂಡ್ಯದ ಬಸರಾಳು ಗ್ರಾಮದಲ್ಲಿ ನಡೆದಿದೆ.
ಹೌದು. 4 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಚಿನ್ನಾಭರಣವನ್ನು ರೈಸ್‌ಮಿಲ್ ಮಾಲೀಕ ತಿಮ್ಮೇಗೌಡ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ರೇಸ್ ಲೆಟ್, ಮಾಂಗಲ್ಯ ಸರ, ಮುತ್ತಿನ ಓಲೆ ಸೇರಿ 4 ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನಾಭರಣಗಳಿದ್ದವು.
ರಾಗಿ ಮೂಟೆ ತಂದಿದ್ದ ಸಣ್ಣ ಪುಟ್ಟ ವ್ಯಾಪಾರಸ್ಥರು ಬಸರಾಳು ಗ್ರಾಮದ ರೈಸ್‌ಮಿಲ್ ಮಾಲೀಕ ತಿಮ್ಮೇಗೌಡರಿಗೆ ಮಾರಿದ್ದರು. ಇನ್ನು ರಾಗಿ ಮೂಟೆ ಬದಲಾಯಿಸುವ ವೇಳೆ ಸಿಕ್ಕ ಚಿನ್ನಾಭರಣದ ಜೊತೆ ಬಿಲ್ ದೊರೆತಿದೆ ಇದರಿಂದ ಅಂಗಡಿ ವಿಳಾಸ ಪತ್ತೆ ಹಚ್ಚಿ ಒಡವೆ ಕಳೆದುಕೊಂಡಿರುವುದನ್ನೇ ತಿಳಿಯದಿದ್ದ ರೈತ ಕಲ್ಲೇಗೌಡ ಕುಟುಂಬಕ್ಕೆ ಚಿನ್ನವನ್ನು ಮರಳಿಸಲಾಗಿದೆ.
ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಲ್ಲಿನಾಥಪುರ ಗ್ರಾಮದ ಕಲ್ಲೇಗೌಡರ ಪತ್ನಿ ಲಕ್ಕಮ್ಮ ಕಳ್ಳರ ಭಯದಿಂದ ರಾಗಿ ಮೂಟೆಯಲ್ಲಿ ಚಿನ್ನಾಭರಣ ಅವಿತಿಟ್ಟಿದ್ದರು. ಗ್ರಾಮದಲ್ಲಿ ಇತ್ತೀಚೆಗೆ ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಲಕ್ಕಮ್ಮ ರಾಗಿ ಮೂಟೆಯಲ್ಲಿ ಚಿನ್ನ ಇಟ್ಟಿದ್ದರು. ಈ ವಿಚಾರ ತಿಳಿಯದೇ ಕಲ್ಲೇಗೌಡ ರಾಗಿ ಮೂಟೆ ಮಾರಾಟ ಮಾಡಿದ್ದರು. ಇನ್ನು ನಿಮ್ಮ ಚಿನ್ನಾಭರಣ ಸಿಕ್ಕಿದೆ ಬಂದು ಪಡೆದುಕೊಳ್ಳಿ ಎಂದು ರೈಸ್ ಮಿಲ್ ಮಾಲೀಕರ ಕರೆ ಮಾಡಿದಾಗ ಕಲ್ಲೇಗೌಡ ಕುಟುಂಬ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದುಕೊಂಡಿದ್ದ ಚಿನ್ನಾಭರಣ ವಾಪಸ್ ಪಡೆದು ಧನ್ಯವಾದ ತಿಳಿಸಿದ್ದಾರೆ. ಸಿಕ್ಕ ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರೈಸ್ ಮಿಲ್ ಮಾಲೀಕ ತಿಮ್ಮೇಗೌಡ ಇತರರಿಗೆ ಮಾದರಿಯಾಗಿದ್ದಾರೆ.
PublicNext
29/10/2021 07:38 pm