ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಬಿಬಿಎಂ ಕಸದ ಲಾರಿ ಗುದ್ದಿ ಬೈಕ್ ಮೇಲೆ ಸಾಗುತ್ತಿದ್ದ ದಂಪತಿ ದಾರುಣವಾಗಿ ಸಾವನ್ನಪ್ಪಿದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ತಂದೆ-ತಾಯಿಯನ್ನು ಕಳೆದುಕೊಂಡ ಈ ಮಕ್ಕಳಿಗೆ ಚಿಕಿತ್ಸೆಗೆ ತಗುಲಿದ್ದ 5.72 ಲಕ್ಷ ರೂ. ಪಾವತಿಸಲೂ ಆಗದೆ ಕಂಗಾಲಾಗಿದ್ದ ಮಕ್ಕಳ ನೆರವಿಗೆ ಧಾವಿಸುವ ಮೂಲಕ ಬ್ಯಾಟರಾಯನಪುರ ಸಂಚಾರ ಠಾಣೆ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.
ಯೋಗೇಂದ್ರ ಮತ್ತು ವಿಜಯಕಲಾ ದಂಪತಿಯ 2 ಮತ್ತು 5ನೇ ತರಗತಿ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳು, ತಂದೆ-ತಾಯಿ ಚಿಕಿತ್ಸೆಗೆ ತಗುಲಿದ್ದ ಆಸ್ಪತ್ರೆ ಬಿಲ್ 5.72 ಲಕ್ಷ ರೂ. ಪಾವತಿ ಮಾಡಲು ಸಾಧ್ಯವಾಗದೆ ಕಂಗಾಲಾಗಿದ್ದರು.
ಅಪಘಾತ ನಡೆದ ದಿನವೇ ದಂಪತಿ ಚಿಕಿತ್ಸೆಗೆ ಬ್ಯಾಟರಾಯನಪುರ ಸಂಚಾರ ಠಾಣೆ ಇನ್ ಸ್ಪೆಕ್ಟರ್ ರೂಪಾ ಹಡಗಲಿ, ಆಸ್ಪತ್ರೆಗೆ 40 ಸಾವಿರ ರೂ. ಪಾವತಿಸಿದ್ದರು. ಗುರುವಾರ ಯೋಗೇಂದ್ರ ಮೃತಪಟ್ಟಿರುವ ವಿಷಯವನ್ನು ಪಶ್ಚಿಮ ವಿಭಾಗ ಡಿಸಿಪಿ ಕುಲದೀಪ್ ಜೈನ್ ಗಮನಕ್ಕೆ ತಂದಿದ್ದರು. ಇನ್ ಸ್ಪೆಕ್ಟರ್ ಮತ್ತು ಡಿಸಿಪಿ ಆಸ್ಪತ್ರೆಗೆ ಭೇಟಿ ಕೊಟ್ಟು ಆಡಳಿತ ಮಂಡಳಿ ಮತ್ತು ವೈದ್ಯರ ಮನವೊಲಿಸಿ ಅಷ್ಟೂ ಹಣವನ್ನು ಮನ್ನಾ ಮಾಡಿಸಿದ್ದಾರೆ.
ಇದಕ್ಕೆ ನಾಗರಬಾವಿ ಜಿ.ಎಂ. ಆಸ್ಪತ್ರೆ ಅಧಿಕಾರಿ, ವೈದ್ಯರು ಸಹಕಾರ ನೀಡುವ ಮೂಲಕ ಹೆಣ್ಣು ಮಕ್ಕಳಿಗೆ ನೆರವಾಗಿದ್ದಾರೆ.
PublicNext
15/07/2022 07:26 pm