ಹುಬ್ಬಳ್ಳಿ: ಹುಬ್ಬಳ್ಳಿಯ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಇಬ್ಬರು ಆಟಗಾರರು ಡಿಕ್ಕಿ ಹೊಡೆದ ಪರಿಣಾಮ ಆಟಗಾರನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ ಎ ಹಾಗೂ ಧಾರವಾಡದ ಎಸ್‌ಡಿಎಂ ಬಿ ತಂಡಗಳ ನಡುವೆ ಪಂದ್ಯದ ನಡೆದ ವೇಳೆ ಘಟನೆ ಸಂಭಸಿವಿದೆ.
19ನೇ ಓವರ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಕವರ್ಸ್ ಹಾಗೂ ಪಾಯಿಂಟ್ ಕ್ಷೇತ್ರದ ನಡುವೆ ಎಸ್‌ಡಿಎಂ ಬಿ ತಂಡದ ಪ್ರಜ್ವಲ್ ಶಿರೋಳ ಮತ್ತು ಪ್ರಜ್ವಲ್ ಬೋರಣ್ಣನವರ ಡಿಕ್ಕಿಯಾಗಿ, ಪ್ರಜ್ವಲ್ ಶಿರೋಳ ಪ್ರಜ್ಞಾಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕ್ಲಬ್‌ನ ಸದಸ್ಯರು, ಪಂದ್ಯ ನೋಡುತ್ತಿದ್ದವರು ಮತ್ತು ಕೆಎಸ್‌ಸಿಎ ಸಿಬ್ಬಂದಿ ಪ್ರಜ್ವಲ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೆಲ ಸಮಯದಲ್ಲಿಯೇ ಸ್ಕ್ಯಾನಿಂಗ್ ಮಾಡಿದಾಗ ಮೆದುಳಿಗೆ ಬಲವಾಗಿ ಪೆಟ್ಟು ಬಿದ್ದಿದ್ದು ದೃಢಪಟ್ಟಿದೆ. ತಕ್ಷಣವೇ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್ ವೀರಣ್ಣ ಸವಡಿ, ಪ್ರಜ್ವಲ್ ಶಿರೋಳ ಪ್ರಜ್ಞಾಹೀನರಾಗಿದ್ದರಿಂದ ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ಹೇಳಿದ್ದರು. ಪೋಷಕರಿಗೆ ವಿಷಯ ತಿಳಿಸಿ ಒಂದೂವರೆ ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಪ್ರಜ್ವಲ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದಿದ್ದಾರೆ.
'ಗಾಯಗೊಂಡಿರುವ ಪ್ರಜ್ವಲ್ ಶಿರೋಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ( ಕೆಎಸ್‌ಸಿಎ ) ಭರಿಸಲಿದೆ. ಪ್ರಜ್ವಲ್ ಶಿರೋಳಗೆ ಪ್ರಜ್ಞೆ ಬಂದಿದೆ. ಮಂಗಳವಾರದ ತನಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಆತನ ಪೋಷಕರು ಚಿಂತಿಸಬೇಕಿಲ್ಲ. ನಮ್ಮ ಸಂಸ್ಥೆ ಆಟಗಾರನ ಪರ ಇರಲಿದೆ. ಸಂಪೂರ್ಣ ಖರ್ಚು ನೋಡಿಕೊಳ್ಳಲಿದೆ ' ಎಂದು ಕೆಎಸ್‌ಸಿಎ ಧಾರವಾಡ ವಲಯದ ನಿಯಂತ್ರಕ ಅವಿನಾಶ ಪೋತದಾರ ತಿಳಿಸಿದ್ದಾರೆ.
Kshetra Samachara
15/11/2021 12:43 pm