ಮಲ್ಲಿಕಾರ್ಜುನ ಪುರದನಗೌಡರ, ಪಬ್ಲಿಕ್ ನೆಕ್ಸ್ಟ್ ವಿಶೇಷ
ಕಲಘಟಗಿ: ಗ್ರಾಮೀಣ ಪ್ರತಿಭೆಯೊಬ್ಬರು ಕೃಷಿ ಕೆಲಸಕ್ಕೆ ಅನುಕೂಲವಾಗುವಂತ ಕಟಾವು ಯಂತ್ರವನ್ನು ತಯಾರಿಸಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು! ಕಲಘಟಗಿ ತಾಲೂಕಿನ ಬೇಗೂರು ಗ್ರಾಮದ ಸಿದ್ದಲಿಂಗಪ್ಪ ಮೆಣಸಿನಕಾಯಿ ಎಂಬ ಯುವಕ ಕೃಷಿ ಕೆಲಸಕ್ಕೆ ಉಪಯೋಗಿಸಲು ವಿನೂತನವಾದ ಪ್ರಯೋಗಕ್ಕೆ ಮುಂದಾಗಿ ಟ್ರ್ಯಾಕ್ಟರ್ ಮೂಲಕ ಬಳಸ ಬಹುದಾದ ಕಟಾವು ಯಂತ್ರವನ್ನು ತಯಾರಿಸಿದ್ದಾನೆ. ಗೋವಿನ ಜೋಳ, ಜೋಳದ ತೆನೆಗಳನ್ನು ಮುರಿದ ಮೇಲೆ, ಮೇವು ಕಟಾವು ಮಾಡಲು ನೂತನ ಯಂತ್ರ ತಯಾರಿಸಿ ರೈತರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲತಃ ಕೃಷಿ ಕುಟುಂಬದ ಸಿದ್ದಲಿಂಗಪ್ಪ ಐಟಿಐ ವೆಲ್ಡರ್ ಓದಿಕೊಂಡು ಅಂಚಟಗೇರಿಯಲ್ಲಿನ ಶಾಲಿಮಾರ್ ವಾಲ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರು ತಮ್ಮ ಬಿಡುವಿನ ವೇಳೆ ಹಾಗೂ ರಜಾ ದಿನಗಳನ್ನು ಸದ್ಬಳಕೆ ಮಾಡಿಕೊಂಡು ಹುಲ್ಲಂಬಿ ಗ್ರಾಮದಲ್ಲಿರುವ ಸಂಬಂಧಿಗಳ ಶ್ರೀ ಸಿದ್ಧಾರೂಢ ವೆಲ್ಡಿಂಗ್, ವರ್ಕ್ಸ್ ನಲ್ಲಿ ಪಂಜಾಬ್ ನಿಂದ ಬಿಡಿ ಭಾಗಗಳನ್ನು ತರಿಸಿ, ಸುಮಾರು ಅರವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಕಟಾವು ಯಂತ್ರವನ್ನು ಮೂರು ತಿಂಗಳ ಸತತ ಪ್ರಯತ್ನದಿಂದ ತಯಾರಿಸಿ ಸಾಧನೆ ಮಾಡಿದ್ದಾರೆ.
ಕಟಾವು ಯಂತ್ರದಿಂದ ರಸ್ತೆ ಬದಿಯ ನಿರುಪಯುಕ್ತ ಹುಲ್ಲನ್ನು ಸಹ ಕಟಾವು ಮಾಡಬಹುದಾಗಿದೆ. ಇದರಿಂದ ಕೃಷಿ ಕೆಲಸದಲ್ಲಿ ರೈತರಿಗೆ ಶಕ್ತಿ, ಸಮಯದ ಉಳಿತಾಯ ಆಗಲಿದೆ. ಸರಕಾರ ಮೆಕ್ ಇನ್ ಇಂಡಿಯಾದಂತಹ ಯೋಜನೆಗಳಲ್ಲಿ ಸ್ಟಾರ್ಟ್ ಅಪ್ ಗಳನ್ನು ತಯಾರಿಸಲು ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ನೆರವು ನೀಡ ಬೇಕಿದೆ.
Kshetra Samachara
11/10/2021 06:06 pm