ಧಾರವಾಡ: ಆ ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದೇವಿಯರು ಬಣ್ಣ ಹಚ್ಚಿಕೊಂಡು ಕಂಗೊಳಿಸುತ್ತಿದ್ದಾರೆ. ಇಡೀ ಗ್ರಾಮದ ಜನ ಭಂಡಾರದಲ್ಲಿ ಮಿಂದೆದ್ದು ಸಂಭ್ರಮದಿಂದ ಜಾತ್ರಾ ಮಹೋತ್ಸವ ಆಚರಿಸುತ್ತಿದ್ದಾರೆ.
ಇಷ್ಟಕ್ಕೂ ಈ ಜಾತ್ರೆ ನಡೆಯುತ್ತಿರುವುದಾದರೂ ಎಲ್ಲಿ ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.
ಇದು ಧಾರವಾಡ ತಾಲೂಕಿನ ಲಕಮಾಪುರ ಗ್ರಾಮ. ಗ್ರಾಮದಲ್ಲಿ ಗ್ರಾಮ ದೇವಿಯರಾದ ದ್ಯಾಮವ್ವ ಮತ್ತು ದುರ್ಗವ್ವನ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದೆ. ಗ್ರಾಮದೇವಿ ದೇವಸ್ಥಾನವನ್ನು ನವೀಕರಿಸಲಾಗಿದ್ದು, ಗ್ರಾಮ ದೇವಿಯರ ಮೂರ್ತಿಗಳಿಗೆ ಬಣ್ಣ ಹಚ್ಚಿಸಲಾಗಿದೆ. ಹೀಗಾಗಿ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತಿದೆ.
ಗ್ರಾಮದೇವಿಯರ ಮೂರ್ತಿಗಳನ್ನು ಇಡೀ ಗ್ರಾಮದ ತುಂಬ ಮೆರವಣಿಗೆ ಮಾಡಿ, ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮೆರವಣಿಗೆಯುದ್ಧಕ್ಕೂ ಘೋಷಣೆಗಳು ಮೊಳಗಿದವು. ಗ್ರಾಮಸ್ಥರು ಪರಸ್ಪರ ಭಂಡಾರ ಎರಚಿಕೊಂಡು ಸಂಭ್ರಮಿಸಿದರು. ಇದರಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇಡೀ ಭಕ್ತ ಸಮೂಹ ಭಂಡಾರದಲ್ಲಿ ಮಿಂದೆದ್ದು ಇಡೀ ವಾತಾವರಣ ಹಳದಿ ವರ್ಣದಿಂದ ಕಂಗೊಳಿಸುವಂತೆ ಮಾಡಿತು.
ಗ್ರಾಮದೇವಿಯರ ಜಾತ್ರೆ ಇದಾಗಿದ್ದರಿಂದ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದ ಹೆಣ್ಣು ಮಕ್ಕಳು ತಮ್ಮ ತವರೂರಿಗೆ ಬಂದು ಗ್ರಾಮದೇವಿಯರಿಗೆ ಉಡಿ ತುಂಬಿದರು. ಒಟ್ಟಾರೆಯಾಗಿ ಲಕಮಾಪುರ ಗ್ರಾಮದಲ್ಲಿ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಕಳೆಗಟ್ಟಿದ್ದು, ಗ್ರಾಮಸ್ಥರು ಸಂಭ್ರಮದಿಂದ ಈ ಜಾತ್ರೆಯನ್ನು ಆಚರಿಸುತ್ತಿದ್ದಾರೆ.
Kshetra Samachara
07/02/2022 08:37 pm