ನಿಮ್ಮ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ. ಪೌರ ಸನ್ಮಾನ ಮಾಡಿ ಕೇವಲ ಒಡಿಶಾದ ಬಡ ಕುಟುಂಬದ ಹೆಣ್ಣುಮಗಳನ್ನು ಸನ್ಮಾನಿಸಿಲ್ಲ. ಇಡೀ ಭಾರತದ ಎಲ್ಲಾ ಹೆಣ್ಣುಮಕ್ಕಳನ್ನು ಗೌರವಿಸಿದ್ದೀರಿ. ನಿಮಗೆಲ್ಲಾ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾವುಕರಾಗಿ ನುಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಆಯೋಜಿಸಲಾಗಿದ್ದ ಪೌರಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಧಾರವಾಡ ಜಿಲ್ಲೆ ವಿದ್ಯಾಕಾಶಿ ಎಂದು ಕರೆಸಿಕೊಳ್ಳುತ್ತಿದೆ. ದ.ರಾ. ಬೇಂದ್ರೆ, ವಿ.ಕೃ.ಗೋಕಾಕ್ ಅಂತಹ ಮಹಾನ್ ಸಾಹಿತಿಗಳು ಇಲ್ಲಿಯವರು. ಸಿಎಂ ಬೊಮ್ಮಾಯಿ ಮತ್ತು ಪ್ರಹ್ಲಾದ್ ಜೋಶಿ ನಿಮ್ಮ ನಡುವೆ ಹುಟ್ಟಿ ಬೆಳೆದವರು. ಇಂತಹ ಉತ್ತಮ ನಾಯಕರನ್ನು ನೀವು ನಾಡಿಗೆ ಕೊಟ್ಟಿದ್ದೀರಿ ಎಂದರು.
ಇಡೀ ದೇಶ ಬಸವೇಶ್ವರರ ಸಾಮಾಜಿಕ ಶಿಕ್ಷಣ, ಸಿದ್ಧಾರೂಢರ ಆಧ್ಯಾತ್ಮಿಕ ಸಂದೇಶದಿಂದ ಪ್ರೇರಿತವಾಗಿದೆ. ಗಂಗೂಬಾಯಿ ಹಾನಗಲ್, ಬಸವರಾಜ್ ರಾಜಗುರು ಹಿಂದೂಸ್ತಾನಿ ಸಂಗೀತಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ. ಕಿತ್ತೂರು ಚೆನ್ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ರಾಜ್ಯದ ಸಾಧಕರಿಗೆ ಸ್ಮರಣೆಯನ್ನು ಸಮರ್ಪಣೆ ಮಾಡಿದರು.
ಅವಳಿನಗರಕ್ಕೆ ಆಗಮಿಸಿ ನನಗೆ ಬಹಳ ಸಂತೋಷವಾಗಿದೆ. ಭಾರತದ ಗೌರವಾನ್ವಿತ ಅವಳಿನಗರ ಹುಬ್ಬಳ್ಳಿ- ಧಾರವಾಡ. ಐತಿಹಾಸಿಕ ನಗರದ ಭಾಗವಾಗಿರುವ ನಿಮಗೆಲ್ಲ ಶುಭಾಶಯಗಳು. ಕನ್ನಡ, ಮರಾಠಿ ಭಾಷೆಗಳ ಅತ್ಯುತ್ತಮ ಸಂಗಮ ಇಲ್ಲಿದೆ. ಎಲ್ಲಾ ಜಾತಿ ಧರ್ಮದ ಜನರು ಇಲ್ಲಿ ಸೌಹಾರ್ದತೆಯಿಂದ ಬದುಕುತ್ತಿದ್ದೀರಿ. ಎರಡನೆ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಇಲ್ಲಿಗೆ ಆಗಮಿಸಿದ್ದರು. ನಿಮ್ಮ ನಡುವೆ ಆಗಮಿಸಿ ನನಗೆ ಗೌರವದ ಭಾವನೆ ಬರುತ್ತಿದೆ ಎಂದು ಅವರು ಭಾವುಕರಾಗಿ ನುಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/09/2022 04:04 pm