ಹುಬ್ಬಳ್ಳಿ: ಮಳೆಯಿಂದ ಬೆಂಗಳೂರಿನಷ್ಟೇ ನವಲಗುಂದ ಕ್ಷೇತ್ರದಲ್ಲೂ ಹಾನಿಯಾಗಿದೆ. ಈ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದ್ದರಿಂದ ಪರಿಹಾರ ಕೊಡುವವರೆಗೂ ಟ್ರ್ಯಾಕ್ಟರ್ ಹಾಗೂ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರತಿಭಟನೆ ಮಾಡಿದ ನಂತರ ಕಾಳಜಿ ಕೇಂದ್ರ ತೆರೆದಿದ್ದಾರೆ. ಸತ್ಯ ದರ್ಶನ ಮಾಡಲು ಗ್ರಾಮ ವಾಸ್ತವ್ಯ ಮಾಡುತ್ತೇನೆ. ಮನೆ ಕಳೆದುಕೊಂಡವರಿಗೆ ತಕ್ಷಣ ಹತ್ತು ಸಾವಿರ ಪರಿಹಾರ ನೀಡಬೇಕು. ಆದರೆ, ಮನೆ ಕಳೆದುಕೊಂಡವರಿಗೆ ಈ ಸರ್ಕಾರ ಪರಿಹಾರ ನೀಡಿಲ್ಲ. ಬೆಂಗಳೂರಿನಲ್ಲಿ ಪರಿಹಾರ ನೀಡುತ್ತಾರೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಏಕೆ ಪರಿಹಾರವಿಲ್ಲ? ಎಂದು ಕ್ಷೇತ್ರದ ಜನರು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಹಾಲಪ್ಪ ಆಚಾರ್ಯ ಭೇಟಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಕ್ಷೇತ್ರದಲ್ಲಿ 200ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿವೆ. ಪರಿಹಾರಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯ ಆಗಿದೆ. ನಾನು ಗ್ರಾಮ ವಾಸ್ತವ್ಯದ ಮೂಲಕ ಹೋರಾಟ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಣ್ಣು ತೆರೆಸುತ್ತೇನೆ. ಪರಿಹಾರ ನೀಡುವವರೆಗೂ ನಿರಂತರ ಹೋರಾಟ ಮಾಡುತ್ತೇನೆ ಎಂದರು.
Kshetra Samachara
07/09/2022 02:14 pm