ಹುಬ್ಬಳ್ಳಿ: ಈಗಾಗಲೇ ಒಂದು ಕೋಟಿ ಧ್ವಜ ಮಾರಾಟವಾಗಿವೆ. ರಾಷ್ಟ್ರ ಧ್ವಜದ ಮಹತ್ವವನ್ನು ಉಕ್ರೇನ್ ಯುದ್ದದ ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿಗಳು ಸಾರಿದ್ದಾರೆ. ಇನ್ನೂ ಯಾರು ಧ್ವಜ ಹಾರಿಸಿಲ್ಲ ಇಂದಿನಿಂದ ತಮ್ಮ ಮನೆಗಳ ಮುಂದೆ ಹಾರಿಸಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದರು.
ನಗರದಲ್ಲಿಂದು ಸ್ವಗೃಹದ ಮುಂದೆ ಧ್ವಜಾರೋಹಣ ನೆರವೇರಿಸಿ ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಈ ವರ್ಷದ ಸ್ವಾತಂತ್ರ್ಯೋತ್ಸವ ನಿಜಕ್ಕೂ ನಮಗೆ ಅತಿ ಮಹತ್ವದ್ದು ಎಂದರು.
ಪ್ರಿಯಾಂಕ್ ಖರ್ಗೆ ಲಂಚ- ಮಂಚ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಇದು ಅವರ ಕೀಳು ಅಭಿರುಚಿ ತೋರಿಸುತ್ತಿದೆ. ಅವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಯಾವ ಮಹಿಳೆಯೂ ಈ ಹೇಳಿಕೆಯನ್ನ ಸಹಿಸುವುದಿಲ್ಲ. ಮಹಿಳಾ ಸಮುದಾಯಕ್ಕೆ ಅವರು ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರವಾಗಿದೆ ಎಂದು ಕಿಡಿ ಕಾರಿದರು.
ಮಲ್ಲಿಕಾರ್ಜುನ್ ಖರ್ಗೆ ಕೇಂದ್ರದ ಸಚಿವರಾಗಿದ್ದಾಗ ಅನೇಕ ವಿಷಯಗಳಲ್ಲಿ ಭ್ರಷ್ಟಾಚಾರವಾಗಿದೆ. ಅವರಿಗೆ ನಾಚಿಕೆ ಮಾನ ಮರ್ಯಾದೆ ಇದ್ದಿದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಸಂಸತ್ ನಿರ್ಮಾಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ನೂರು ವರ್ಷಕ್ಕೆ ಸಂಸತ್ ಯಾವ ರೀತಿ ಇರಬೇಕು ಎಂಬ ಚಿಂತನೆಯಲ್ಲಿ ಸಂಸತ್ ನಿರ್ಮಾಣ ಮಾಡಲಾಗಿದೆ. ಜಗತ್ತಿನಲ್ಲೇ ಈ ರೀತಿಯ ಕಟ್ಟಡ ಎಲ್ಲಿಯೂ ನಿರ್ಮಾಣ ಮಾಡಿಲ್ಲ. ಜಗತ್ತಿಗೆ ಒಂದು ಉತ್ತಮ ನಿದರ್ಶನ ಈ ಸಂಸತ್ತು ಎಂದರು.
ಸ್ಲಗ್: "ಪ್ರತಿ ಮನೆಯಲ್ಲೂ ತಿರಂಗಾ ರಾರಾಜಿಸಲಿ"
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/08/2022 11:07 am