ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ 2014ರಲ್ಲಿ ಡಾ. ಶ್ರೀದೇವಿ ಅವರನ್ನು ಸಹ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿರುವುದನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಆದರೆ, ಕುಲಪತಿಗಳು ನ್ಯಾಯಾಲಯದ ಆದೇಶ ಪಾಲಿಸದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಸಿಂಡಿಕೇಟ್ ಮಾಜಿ ಸದಸ್ಯ ಜಯಂತ ಕೆ.ಎಸ್. ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶ ಪಾಲಿಸದಿರುವ ಕುಲಪತಿಗಳ ನಡೆಯನ್ನು ಖಂಡಿಸಿದರು.
ಕುಲಪತಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಬೇಕು ಕೋರ್ಟ್ ಆದೇಶ ಪಾಲನೆ ಮಾಡಬೇಕು. ಶ್ರೀದೇವಿ ಪರವಾಗಿ ಸಿಂಡಿಕೇಟ್ ಸದಸ್ಯರೊಬ್ಬರು ಬೆಂಗಾವಲಾಗಿ ನಿಂತಿದ್ದಾರೆ. ಇದರ ಬಗ್ಗೆ ನಾವು ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಸಹಾಯಕ ಪ್ರಾಧ್ಯಾಪಕರಾದ ಶ್ರೀದೇವಿಯವರ ನೇಮಕವನ್ನು ಕರ್ನಾಟಕ ಹೈಕೋರ್ಟ್ನ ಏಕ ಸದಸ್ಯ ಪೀಠ ರದ್ದುಪಡಿಸಿ 2022ರ ಎ.11 ರಂದು ಆದೇಶ ಹೊರಡಿಸಿದೆ. ಅದರಂತೆ ವಿಭಾಗೀಯ ಪೀಠವೂ ಆದೇಶ ಮಾಡಿದೆ. ಹೀಗಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಆದೇಶ ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ರೀತಿ ಇನ್ನೂ ಅನೇಕ ಬೋಧಕ-ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಡಾ. ಶ್ರೀದೇವಿ ಅವರನ್ನು ವಜಾಗೊಳಿಸಿದರೆ, ಇತರರನ್ನು ಕೂಡ ವಜಾಗೊಳಿಸಬೇಕಾಗುತ್ತದೆ ಎಂಬ ಆತಂಕ ಕುಲಪತಿಗಳಲ್ಲಿ ಇರಬಹುದು ಎಂದರು.
ಡಾ.ಶ್ರೀದೇವಿ ಪ್ರಕರಣದಲ್ಲಿ ಕುಲಪತಿಗಳು ನ್ಯಾಯಾಲಯದ ಆದೇಶವನ್ನು ಪಾಲಿಸದೇ ವಿಳಂಬ ಮಾಡುತ್ತಿರುವುದರ ಹಿಂದೆ ಒತ್ತಡ ಇದ್ದು, ಕುಲಪತಿ ಡಾ. ಕೆ.ಬಿ.ಗುಡಸಿ ಅವರು ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸಲು ಹಿಂದೇಟು ಹಾಕುವಂತಾದರೆ, ಮುಂದಿನ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದರು.
ಈ ವಿಷಯ ಕುರಿತು ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕುಲಪತಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದೇವೆ ಎಂದರು.
ಸ್ಲಗ್
ಹೈಕೋರ್ಟ್ ಆದೇಶಕ್ಕೆ ಕಿಮ್ಮತ್ತಿಲ್ಲ
Kshetra Samachara
06/05/2022 11:00 pm