ಧಾರವಾಡ: ನಾನು ಕೂಡ ಪಂಚಮಸಾಲಿ ಲಿಂಗಾಯತ ಸಮಾಜದ ಹೆಣ್ಣು ಮಗಳು. ಆದರೆ, ನಾನು ಆರಾಧಿಸುವುದು ಮಾತ್ರ ಯೇಸು ಕ್ರಿಸ್ತನನ್ನು ಎಂದು ಗಂಗಮ್ಮ ಹಳ್ಳೂರ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ನನ್ನ ತಮ್ಮ ಸೋಮು ಪಾಸ್ಟರ್ ಎಂಬಾತನನ್ನು ಪೊಲೀಸರು ಮತಾಂತರದ ಆರೋಪದ ಮೇಲೆ ಬಂಧಿಸಿದ್ದಾರೆ. ಭೈರಿದೇವರಕೊಪ್ಪದ ಬಳಿ ನಾವೇ ದುಡಿದು ಪ್ರಾರ್ಥನಾ ಮಂದಿರ ಕಟ್ಟಿಸಿದ್ದೇವೆ. ಅಲ್ಲಿ ಮನಃಶಾಂತಿಗಾಗಿ ಅನೇಕರು ಪ್ರಾರ್ಥನೆಗೆ ಬರುತ್ತಾರೆ. ಮನಃಶಾಂತಿಗಾಗಿ ಅನೇಕರು ಪ್ರಾರ್ಥನೆಗೆ ಬಂದರೆ ಅದನ್ನು ಮತಾಂತರ ಎಂದು ಹೇಗೆ ಎನ್ನುತ್ತಾರೆ? ನಾವು ನಮ್ಮಿಷ್ಟದ ದೇವರನ್ನು ಆರಾಧಿಸುವ ಹಕ್ಕು ಕೂಡ ನಮಗಿಲ್ಲವೇ? ಪ್ರಾರ್ಥನಾ ಮಂದಿರದಲ್ಲಿ ನಾವು ಯಾರನ್ನೂ ಮತಾಂತರ ಮಾಡಿಲ್ಲ. ಬನ್ನಿ ನಿಮಗೆ ಹಣ ಕೊಡುತ್ತೇವೆ ಮನೆ ಕಟ್ಟಿಸಿಕೊಡುತ್ತೇವೆ ಎಂದು ಆಮಿಷ ಒಡ್ಡಿ ಯಾರನ್ನೂ ನಾವು ಮತಾಂತರ ಮಾಡಿಲ್ಲ. ನಾನೂ ಕೂಡ ಪಂಚಮಸಾಲಿ ಲಿಂಗಾಯತ ಸಮುದಾಯದ ಹೆಣ್ಣು ಮಗಳು. ನಾನು ಮತಾಂತರ ಆಗಿಲ್ಲ. ಆದರೆ, ಮನಃಪರಿವರ್ತನೆ ಮಾತ್ರ ಮಾಡಿಕೊಂಡು ನಮ್ಮಿಷ್ಟದ ಯೇಸು ಕ್ರಿಸ್ತನನ್ನು ಆರಾಧಿಸುತ್ತಿದ್ದೇವೆ ಎಂದರು.
ಮೊನ್ನೆ ಭೈರಿದೇವರಕೊಪ್ಪದಲ್ಲಿ ಹೆಣ್ಣುಮಕ್ಕಳಷ್ಟೇ ಇದ್ದಾಗ ಚರ್ಚ್‌ಗೆ ನುಗ್ಗಿ ದಾಂಧಲೆ ಮಾಡಲಾಗಿದೆ. ಪೊಲೀಸರು ಇರದೇ ಹೋಗಿದ್ದರೆ ಅಂದು ಅನಾಹುತವೇ ನಡೆಯುತ್ತಿತ್ತು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸುವುದೇ ಇವರ ಸಭ್ಯತೆಯೇ? ಇವರ ಹೆಣ್ಣು ಮಕ್ಕಳ ಮೇಲೆ ಈ ರೀತಿ ದೌರ್ಜನ್ಯ ನಡೆದರೆ ಸುಮ್ಮನೆ ಇರುತ್ತಾರಾ? ನಮ್ಮ ಪ್ರಾರ್ಥನೆಗೆ ಹಾಗೂ ಎಲ್ಲಾ ಸಭೆಗಳಿಗೆ ಸರ್ಕಾರ ಭದ್ರತೆ ನೀಡಬೇಕು ಎಂದರು.
Kshetra Samachara
21/10/2021 04:56 pm