ವರದಿ: ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ
ಧಾರವಾಡ: ನವಲಗುಂದ ರೈತ ಬಂಡಾಯದ ನೆಲ. ಈ ಭಾಗದ ರೈತರ ಹಕ್ಕೊತ್ತಾಯ ಒಂದೇ ಕಳಸಾ, ಬಂಡೂರಿ ನಾಲಾ ಜೋಡಣೆ ಮಾಡಬೇಕು ಎಂಬುದು. ಗದಗ ಜಿಲ್ಲೆಯ ನರಗುಂದ ಹಾಗೂ ಧಾರವಾಡ ಜಿಲ್ಲೆಯ ನವಲಗುಂದ ಎರಡೂ ಪಟ್ಟಣಗಳು ರೈತ ಬಂಡಾಯಕ್ಕೆ ಹೆಸರುವಾಸಿಯಾದ ನೆಲಗಳು. ನವಲಗುಂದ ಎಂದರೆ ನೆನಪಾಗೋದು ಕಳಸಾ, ಬಂಡೂರಿ ಹೋರಾಟ. ಈ ಹೋರಾಟದ ನೆಲದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ಶಂಕರ ಪಾಟೀಲ ಮುನೇನಕೊಪ್ಪ ಇದೀಗ ರಾಜ್ಯ ಸರ್ಕಾರದ ನೂತನ ಸಚಿವರಾಗಿ ಆಯ್ಕೆಯಾಗಿದ್ದಾರೆ.
ಶಂಕರ ಪಾಟೀಲ ಮುನೇನಕೊಪ್ಪ ರೈತ ಕುಟುಂಬದಿಂದ ಬಂದವರು. 1969 ರಲ್ಲಿ ಅಮರಗೋಳದ ರೈತ ಕುಟುಂಬದಲ್ಲಿ ಜನಿಸಿರುವ ಮುನೇನಕೊಪ್ಪ, ಬಿಎ ಪದವೀಧರರಾಗಿದ್ದಾರೆ. ಇಂದಿಗೂ ಕೃಷಿಯೇ ಇವರ ಪ್ರಮುಖ ಕಾಯಕ. 2008ರಲ್ಲಿ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜನತಾ ಪರಿವಾರ ತೊರೆದು ಸಂಘ ಪರಿವಾರ ಸೇರಿದ ಶಂಕರ ಪಾಟೀಲ, ನವಲಗುಂದ ಮತಕ್ಷೇತ್ರದಿಂದ 2008ರಲ್ಲೇ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅಂದಿನ ಅವಧಿಯಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಮುನೇನಕೊಪ್ಪ ಕೆಲಸ ಮಾಡಿದ್ದರು. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪುನರಾಯ್ಕೆ ಬಯಸಿದ್ದ ಮುನೇನಕೊಪ್ಪ ಅವರಿಗೆ ಎನ್.ಎಚ್.ಕೋನರೆಡ್ಡಿ ಅವರು ಸೋಲಿನ ರುಚಿ ತೋರಿಸಿದ್ದರು. ಐದು ವರ್ಷಗಳ ಕಾಲ ನವಲಗುಂದ ಕ್ಷೇತ್ರದ ಜನ ಹಾಗೂ ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಳಸಾ, ಬಂಡೂರಿ ಹೋರಾಟದಲ್ಲಿ ಮುನೇನಕೊಪ್ಪ ಸಕ್ರೀಯವಾಗಿದ್ದರು. 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮುನೇನಕೊಪ್ಪ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್ ನಾಯಕ ಕೆ.ಎನ್.ಗಡ್ಡಿ ಅವರ ತರುವಾಯ ನವಲಗುಂದ ಭಾಗಕ್ಕೆ ಸಚಿವ ಸ್ಥಾನ ನೀಡಲಾಗಿದೆ.
ಶಂಕರ ಪಾಟೀಲ ಅವರು ಏತ ನೀರಾವರಿ ಮೂಲಕ 10 ಸಾವಿರ ಎಕರೆ ಜಮೀನುಗಳಿಗೆ ನೀರು ಪೂರೈಸುವ ಯೋಜನೆ ಕೈಗೆತ್ತಿಕೊಂಡಿದ್ದಾರೆ. ನವಲಗುಂದ ಭಾಗದ ರೈತರ ಪ್ರಮುಖ ಬೇಡಿಕೆಯಾದ ಕಳಸಾ, ಬಂಡೂರಿ ನಾಲಾ ಜೋಡಣೆ ಒತ್ತಾಯಕ್ಕೆ ಧ್ವನಿಯಾಗಿ ನಿಂತಿದ್ದಾರೆ. ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳದ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಅದಕ್ಕೆ ಶಾಶ್ವತ ಪರಿಹಾರ ನೀಡುವುದಕ್ಕಾಗಿ ಯೋಜನೆ ರೂಪಿಸಿದ್ದಾರೆ.
ನವಲಗುಂದ ಭಾಗದ ರೈತರೊಂದಿಗೆ ಉತ್ತಮ ಒಡನಾಟ ಹೊಂದಿ ಜನಪ್ರಿಯ ಶಾಸಕರಾಗಿರುವ ಮುನೇನಕೊಪ್ಪ ಅವರು ರೈತರ ಹೆಸರಿನಲ್ಲೇ ಇಂದು ಪ್ರಮಾಣವಚನ ಸ್ವೀಕರಿಸಿರುವುದು ಗಮನಾರ್ಹ. ಧಾರವಾಡ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ಕ್ಷೇತ್ರ ನವಲಗುಂದ. ಮುನೇನಕೊಪ್ಪ ಅವರು ಶಾಸಕ ಸ್ಥಾನದಲ್ಲಿರುವಾಗಲೇ ಅತ್ಯಂತ ಹೆಚ್ಚು ಅನುದಾನ ತಂದು ತಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಈಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಮುನೇನಕೊಪ್ಪ ಅವರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ನವಲಗುಂದ ಭಾಗದ ಜನ.
Kshetra Samachara
04/08/2021 08:30 pm