ಧಾರವಾಡ: ವೀರಶೈವ ಲಿಂಗಾಯತ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂಬುದು 4 ದಶಕಗಳ ಬೇಡಿಕೆ. ಹೀಗಾಗಿ ಈ ಬೇಡಿಕೆಗೆ ಸರ್ಕಾರ ಆದಷ್ಟು ಬೇಗ ಸ್ಪಂದಿಸುತ್ತದೆ ಎಂಬ ನಂಬಿಕೆ ಇದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಬದಲಾವಣೆ ಎಂಬುದು ಜಗದ ನಿಯಮ. ಈ ಹಿಂದೆ ಶಂಕರಾಚಾರ್ಯರು, ಮಧ್ವಾಚಾರ್ಯರು, ಭಗವಾನ್ ಬುದ್ಧ ಆಯಾ ಕಾಲದಲ್ಲಿ ಏನು ಬದಲಾವಣೆ ಆಗಬೇಕಿತ್ತೋ ಅದನ್ನು ಮಾಡಿದ್ದರು. ಬಸವಣ್ಣ ಹಾಗೂ ಅಂಬೇಡ್ಕರರು ಕೂಡ ಅದನ್ನೇ ಮಾಡಿದ್ದಾರೆ. ದೇವರಾಜ ಅರಸು ಅವರ ಕಾಲದ ಹಾವನೂರು ವರದಿಯಲ್ಲೂ ಕೂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮೀಸಲಾತಿ ಅನಿವಾರ್ಯ ಎಂದು ಹೇಳಲಾಗಿದೆ. ಅದರ ಮುಂದುವರಿದ ಭಾಗವೇ ನಿನ್ನೆ ನಡೆದ ಬೃಹತ್ ಸಮಾವೇಶ ಎಂದರು.
ಕೈಗಾರಿಕರಣದಿಂದ ಕೃಷಿ ವಿಮುಖವಾಗುತ್ತಿದೆ. ಲಿಂಗಾಯತ ಪಂಚಮಸಾಲಿ ಸಮುದಾಯದವರೇ ಹೆಚ್ಚು ಕೃಷಿಕರಾಗಿದ್ದಾರೆ. ಕೃಷಿ ಮಾಡುವವನು ಇದೀಗ ಕೃಷಿ ಕಾರ್ಮಿಕನಾಗಿದ್ದಾನೆ. ಇದನ್ನೆಲ್ಲ ನೋಡಿದರೆ ಉಳಿದವರಿಗಿಂದ ಲಿಂಗಾಯತ ಪಂಚಮಸಾಲಿ ಸಮಾಜ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಹೀಗಾಗಿ ಸರ್ಕಾರ ಈ ಸಮಾಜಕ್ಕೆ ಮೀಸಲಾತಿ ನೀಡಲು ಎಷ್ಟು ಸಮಯ ಬೇಕಾಗುತ್ತದೆ ಎಂದು ತಿಳಿಸಿದರೆ ಸಮಾಜದ ಜನ ಶಾಂತವಾಗುತ್ತಾರೆ ಎಂದರು.
ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬೆಲ್ಲದ, ಆ ರಸ್ತೆಯಲ್ಲಿ ಅಪಘಾತಗಳೇ ಆಗಿಲ್ಲ ಅದೊಂದು ಉತ್ಕೃಷ್ಟ ರಸ್ತೆ ಎಂದು ವರದಿ ನೀಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಹಾಗೆ ವರದಿ ನೀಡಿದ್ದರೆ ಅದೇ ಒಂದು ಕ್ರಿಮಿನಲ್ ಕೆಲಸ ಆಗುತ್ತದೆ. ಆ ವರದಿಯನ್ನು ನೋಡಿ ಯಾರು ಆ ರೀತಿ ವರದಿ ನೀಡಿದ್ದಾರೋ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. 2007 ರಲ್ಲಿ ಅದೇ ರಸ್ತೆಯಲ್ಲಿ ನನಗೆ ಅಪಘಾತವಾಗಿತ್ತು. ನಾನು ಬದುಕಿ ಬಂದಿದ್ದೇ ಹೆಚ್ಚು ಎಂದರು.
ಯತ್ನಾಳ ಅವರನ್ನು ಹೈಕಮಾಂಡ್ ಏಕೆ ದೆಹಲಿಗೆ ಕರೆಯಿಸಿಕೊಂಡಿದೆ ಎಂಬುದು ಗೊತ್ತಿಲ್ಲ. ಅದನ್ನು ಯತ್ನಾಳ ಅವರನ್ನೇ ಕೇಳಬೇಕು ಎಂದು ಬೆಲ್ಲದ ಯತ್ನಾಳ ಕುರಿತ ಪ್ರಶ್ನೆಗೆ ಉತ್ತರಿಸಿದರು.
Kshetra Samachara
22/02/2021 05:22 pm