ಧಾರವಾಡ: ಜ.15 ರಂದು ಹುಬ್ಬಳ್ಳಿ, ಧಾರವಾಡ ಬೈಪಾಸ್ ರಸ್ತೆಯ ಇಟಿಗಟ್ಟಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬಸ್ಥರು ಫೆ.6 ರಂದು ಇಟಿಗಟ್ಟಿ ಬಳಿಯ ಬೈಪಾಸ್ ರಸ್ತೆಗೆ ಬಂದು ಪ್ರತಿಭಟನೆ ನಡೆಸಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.15 ರಂದು ನಡೆದ ಅಪಘಾತ ಧಾರವಾಡ ಹಿಂದೆಂದೂ ಕಂಡಿರಲಿಲ್ಲ. ಇದಕ್ಕೆಲ್ಲ ನೇರ ಹೊಣೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಶೋಕ ಖೇಣಿ ಎಂದು ಆರೋಪಿಸಿ ನೀರಲಕೇರಿ, ಇಂದು ತಮ್ಮ ತಾಯಿಯನ್ನು ಕಳೆದುಕೊಂಡ ಅವರ ಮಕ್ಕಳು ಅನಾಥವಾಗಿವೆ ಎಂದು ಭಾವುಕರಾದರು.
ಈ ಹೆದ್ದಾರಿಯನ್ನು ಅಗಲೀಕರಣ ಮಾಡಲಾಗುವುದು ಎಂದು ಈ ಭಾಗದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಕೇವ ಬಾಯಿ ಮಾತಿನಲ್ಲಿ ಹೇಳುತ್ತಿದ್ದಾರೆ. ಆ ಕಾರ್ಯ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಯಾವುದೇ ಪಕ್ಷದ ನಾಯಕರಿದ್ದರೂ ಈ ರಸ್ತೆ ಅಗಲೀಕರಣಕ್ಕೆ ಕಾಳಜಿ ವಹಿಸಬೇಕು ಎಂದರು.
ಫೆ.6 ನೇ ತಾರೀಖಿನಂದು, ಅಪಘಾತದಲ್ಲಿ ಸಾವನ್ನಪ್ಪಿದ ಎಲ್ಲ ಮಹಿಳೆಯರ ಕುಟುಂಬಸ್ಥರು ಬಂದು ಅದೇ ಜಾಗದಲ್ಲಿ ಪೂಜೆ ಸಲ್ಲಿಸಿ ರಸ್ತೆಯನ್ನು ಎರಡ್ಮೂರು ಗಂಟೆಗಳ ಕಾಲ ಬಂದ್ ಮಾಡಲಿದ್ದೇವೆ. ಅವರ ಕುಟುಂಬಕ್ಕೆ ಆದ ನೋವು ಇನ್ನೊಬ್ಬರ ಕುಟುಂಬಕ್ಕೆ ಆಗಬಾರದು ಎಂದು ಉದ್ದೇಶದಿಂದ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
Kshetra Samachara
03/02/2021 04:10 pm