ನವಲಗುಂದ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಇದೀಗ ಸಚಿವರೂ ಆಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ಈ ಬಾರಿ ಶತಾಯ ಗತಾಯ ಸೋಲಿಸಲು ಎಲ್ಲಾ ತಯಾರಿ ನಡೆದಿದೆ. ಪ್ರತಿಪಕ್ಷಗಳ ನಾಯಕರೂ ಒದ್ದಾಗಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅವರು ಈ ಬಾರಿ ತಮಗೇ ಕಾಂಗ್ರೆಸ್ ಟಿಕೆಟ್ ಪಕ್ಕಾ ಎನ್ನುವ ಹುರುಪಿನಲ್ಲಿರುವಾಗಲೇ ನಲಪಾಡ್ ಅವರ ವೀಡಿಯೋ ಒಂದು ವೈರಲ್ ಆಗಿ ಕೋನರಡ್ಡಿ ಅವರ ಎದೆಯಲ್ಲಿ ಢವ ಢವ ಉಂಟು ಮಾಡಿದೆ.
ಹೌದು! ಕೋನರಡ್ಡಿ ಅವರು ಈಗಾಗಲೇ ಜೆಡಿಎಸ್ನಿಂದ ಸ್ಪರ್ಧಿಸಿ ಈಗಾಗಲೇ ಒಂದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಕಾಂಗ್ರೆಸ್ ಸೇರಿ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದು ಮತ್ತೊಂದು ಬಾರಿ ಶಾಸಕರಾಗಿ ಆಯ್ಕೆಯಾಗಬೇಕೆನ್ನುವ ಹುರುಪಿನಲ್ಲಿದ್ದಾರೆ. ಆದರೆ, ಮೂಲ ಕಾಂಗ್ರೆಸ್ಸಿಗ ವಿನೋದ ಅಸೂಟಿ ಮತ್ತು ಕೋನರಡ್ಡಿ ಮಧ್ಯೆ ಇದೀಗ ಟಿಕೆಟ್ ಪೈಪೋಟಿ ಏರ್ಪಟ್ಟಿದೆ.
ಮೊನ್ನೆ ಧಾರವಾಡದ ಮಯೂರ್ ಹೋಟೆಲ್ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್ ನಲಪಾಡ್ ಅವರು ನನ್ನ ಗೆಳೆಯ ವಿನೋದ್ ಅಸೂಟಿಗೆ ನವಲಗುಂದ ಕಾಂಗ್ರೆಸ್ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂಬ ಹೇಳಿಕೆ ಕೊಟ್ಟಿದ್ದಾರೆ.
ಈಗಾಗಲೇ ಕೋನರಡ್ಡಿ ಕಾಂಗ್ರೆಸ್ ಟಿಕೆಟ್ ನನಗೇ ಸಿಕ್ಕೇ ಸಿಗುತ್ತದೆ ಎಂದು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದಾರೆ. ಇದರ ಮಧ್ಯೆ ಅಸೂಟಿ ಕೂಡ ತಮ್ಮದೇ ಆದ ಶೈಲಿಯಲ್ಲಿ ಗ್ರೌಂಡ್ ವರ್ಕ್ ಆರಂಭಿಸಿದ್ದಾರೆ. ಅಲ್ಲದೇ ವಿನೋದ್ ಅಸೂಟಿ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಹೀಗಾಗಿ ಮೂಲ ಕಾಂಗ್ರೆಸ್ಸಿಗರಾದ ಅಸೂಟಿಗೆ ಟಿಕೆಟ್ ಕೊಡಿಸುತ್ತೇವೆ ಎಂಬ ಮಾತು ಕೇಳಿ ಬರುತ್ತಿದ್ದು, ಕೋನರಡ್ಡಿ ಜೆಡಿಎಸ್ ಬಿಟ್ಟು ಅತಂತ್ರರಾದ್ರಾ ಎಂಬ ಪ್ರಶ್ನೆ ಮೂಡಿದೆ.
ಏನೇ ಆಗಲಿ ಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆದಿದ್ದು, ನವಲಗುಂದ ಕ್ಷೇತ್ರದ ಇಬ್ಬರು ಕಾಂಗ್ರೆಸ್ ನಾಯಕರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಏರ್ಪಟ್ಟಿದ್ದಂತೂ ಸುಳ್ಳಲ್ಲ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/07/2022 01:18 pm