ನವಲಗುಂದ : ಅತಿವೃಷ್ಟಿಯಿಂದ ಕಂಗಲಾದ ರೈತರಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ರೈತರಿಗೆ ಈ ಬಾರಿ ವರುಣ ಬಿಟ್ಟು ಬಿಡದೇ ಕಾಡಿದ್ದಾನೆ. ಇನ್ನೇನು ಮುಂಗಾರು ಬೆಳೆಯಾದ ಹೆಸರು ಬೆಳೆ ಕೈಗೆ ಬಂತು ಎನ್ನುವಷ್ಟರಲ್ಲಿ ಸುರಿದ ಮಳೆಗೆ ನವಲಗುಂದ ಭಾಗದ ಹಲವು ರೈತರ ನೂರಾರು ಎಕರೆ ಬೆಳೆ ಜಲಾವೃತಗೊಂಡು ರೈತನನ್ನು ಅತಂತ್ರ ಸ್ಥಿತಿಗೆ ದೂಡಿದೆ.
ಹಾಗೋ, ಹೇಗೋ ಬಂದಷ್ಟು ಬೆಳೆಯನ್ನು ಕಟಾವು ಮಾಡಿ, ರಸ್ತೆಯಲ್ಲಿ ದಾಸ್ತಾನು ಮಾಡಿಕೊಂಡು ರೈತರು ಕಾಯುತ್ತಿದ್ದಾರೆ. ಆದರೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಸರ್ಕಾರ ತೆರೆಯದೆ ಇರೋದೇ, ಈಗ ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಈ ಬಗ್ಗೆ ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಹಾಗೂ ವಿನೋದ ಅಸೂಟಿ ಸಹ ರೈತರನ್ನು ಭೇಟಿಯಾಗಿ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿದ್ದಾರೆ.
ಇನ್ನು ಖರೀದಿ ಕೇಂದ್ರ ಆರಂಭ ಆದ್ರೂ ಸಹ ದಲ್ಲಾಳಿಗಳ ಹಾವಳಿಯಿಂದ ರೈತರು ಬೆಳೆದ ಬೆಳೆಗೆ ಬೆಲೆನೇ ಇಲ್ಲ ಎನ್ನುವ ಆರೋಪವಿದೆ. ಒಂದೆಡೆ ಮಳೆರಾಯನ ಕಾಟ. ಇನ್ನೊಂದೆಡೆ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ಪಂದಿಸಬೇಕಿದ್ದ ಸಚಿವರು ಸಹ ಕ್ಯಾರೆ ಎನ್ನುತ್ತಿಲ್ಲ ಎಂಬುದು ರೈತರ ಆಕ್ರೋಶವಾಗಿದೆ.
ಪ್ರತಿ ಕ್ಷಿಂಟಲ್ಗೆಚ 5 ರಿಂದ 6 ಸಾವಿರ ಒಳಗಡೆ ವ್ಯಾಪಾರಸ್ಥರು ಖರೀದಿಸಲು ಪ್ರಾರಂಭಿಸಿದ್ದಾರಂತೆ. ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಎಮ್.ಎಸ್.ಪಿ ದರಕ್ಕಿಂತ ಕಡಿಮೆಯಾದರೆ, ಸರ್ಕಾರ ಮಧ್ಯ ಪ್ರವೇಶಿಸಿ, ಖರೀದಿ ಕೇಂದ್ರ ಪ್ರಾರಂಭಿಸಬೇಕೆಂಬ ನಿಯಮವಿದ್ದರೂ ಇಲ್ಲಿಯವರೆಗೆ ಖರೀದಿ ಕೇಂದ್ರ ಪ್ರಾರಂಭಿಸಿಲ್ಲ. ಇದರಿಂದ ರೈತರು ಅಸಹಾಯಕತೆಯಲ್ಲಿ ಸಿಲುಕಿದ್ದಾರೆ. ಕೂಡಲೇ ಸಚಿವರು ಇತ್ತ ಗಮನ ಹರಿಸಿ, ಖರೀದಿ ಕೇಂದ್ರ ಪ್ರಾರಂಭಿಸಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್, ನವಲಗುಂದ
Kshetra Samachara
21/08/2022 12:32 pm