ಧಾರವಾಡ: ಹಾ.. ನಮಸ್ಕಾರ್ರಿ ಪಾ ಧಾರವಾಡದ ಮಹಾಜನತೆಗೆ.. ನಮ್ಮ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮುಗದು ಸದಸ್ಯರೂ ಆಯ್ಕೆ ಆಗ್ಯಾರ. ಇವರಿಗೆ ಅಧಿಕಾರಾನೂ ಬಂದೈತಿ. ಆದ್ರ ಸಿಕ್ಕ ಅಧಿಕಾರ ಹೆಂಗ ಬಳಕೆ ಮಾಡ್ಕೋಬೇಕು ಅನ್ನುದು ಇವ್ರಿಗೆ ಗೊತ್ತಿಲ್ಲದಂಗ ಆಗೇತಿ ನೋಡ್ರಿ..
ಇದು ಧಾರವಾಡದ ವಾರ್ಡ್ ನಂಬರ್ 22. ಹೊಸಯಲ್ಲಾಪುರ ಡಂಪಿಂಗ್ ಯಾರ್ಡ್ ಮಗ್ಗಲದಾಗ ಬರು ಚುರುಮುರಿ ಭಟ್ಟಿ, ಜನ್ನತನಗರ, ಕೋಳಿಕೆರಿ ಇದರ ಕಥಿ ಒಮ್ಮಿ ನೋಡಿಬಿಟ್ರ. ಈ ವಾರ್ಡಿನ ಕಾರ್ಪೋರೇಟರ್ ಯಾರ್ರಿ ಅವಾ ಮಹಾಶಯ ಅಂತ ಕೇಳ್ತೀರಿ. ಈ ವಾರ್ಡಿನ್ ಕಾರ್ಪೋರೇಟರ್ ಮತ್ತ್ಯಾರೂ ಅಲ್ರಿ. ಅವರ ನಮ್ಮ ಬಿಲ್‌ಕಿಸ್ ಬಾನು ಮುಲ್ಲಾ ಮೇಡಂ.
ಮುಲ್ಲಾ ಮೇಡಂ.. ನಿಮ್ಮ ವಾರ್ಡಿನ್ಯಾಗ ಚುರುಮುರಿ ಬಟ್ಟಿ, ಜನ್ನತನಗರ ಅಂತ ಏರಿಯಾ ಬರತಾವು ಅನ್ನೋದನ್ನ ನೀವು ಮರತಂಗ ಕಾಣಿಸ್ತೈತಿ. ಅಲ್ಲಿನ ಜನಾ, ಚುನಾವಣೆದಾಗ ಬಂದ ಹೋದಾವ್ರು ಮತ್ತ ಹೊಳ್ಳಿ ಬಂದೇ ಇಲ್ಲ ಅನ್ನಾಕತ್ತಾರ. ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳದ್ರೂ ಇಲ್ಲಿನ ಜನಕ್ಕ ಒಂದ ಸುಸಜ್ಜಿತ ರಸ್ತೆ ಇಲ್ಲದಂಗ ಆಗೇತಿ. ಏನೋ ಮುಲ್ಲಾ ಮೇಡಂನ್ನ ಆರಿಸಿ ಕಳಿಸಿದ್ರ ನಮಗ ರಸ್ತೆನರ ಮಾಡಿಕೊಡ್ತಾರ, ಚರಂಡಿ ವ್ಯವಸ್ಥೆ ಮಾಡ್ತಾರ, ಬೀದಿ ದೀಪದ ವ್ಯವಸ್ಥೆ ಮಾಡಿಕೊಡ್ತಾರ ಅಂತ ಆಸೆ ಇಟಕೊಂಡಾರ. ಅವರ ಆಸೆಗೆ ತಣ್ಣೀರ ಎರಚಬ್ಯಾಡ್ರಿ. ಯಾಕಂದ್ರ ಇಲ್ಲಿ ರಸ್ತೆ, ಚರಂಡಿ, ಬೀದಿ ದೀಪದ ಸಮಸ್ಯೆ ಬಾಳ ಐತಿ. ಕೋಳಿಕೆರ್ಯ್ಯಾಗ ಕಸಾ ಬೆಳದು ನೋಡಾಕ ಬರದಂಗ ಆಗೇತಿ. ಕೆರಿ ದಂಡಿ ಅನ್ನುದು ಗಬ್ಬೆದ್ದ ಹೋಗೇತಿ. ಇದನ್ನ ಯಾವಾಗ ಸ್ವಚ್ಛ ಮಾಡಸ್ತಾರೋ ದೇವ್ರ ಬಲ್ಲ. ಕೆರಿ ದಂಡಿ ಒಂದು ಭಾಗ ಬೇರೆ ಕಾರ್ಪೋರೇಟರ್‌ಗ ಬರತೈತಂತ. ಬರ್ರಿ ಅಲ್ಲಿನ ಜನಾ ಏನ್ ಹೇಳ್ತಾರಂತ ಕೇಳುಣ.
ನೋಡ್ರಿ ಮುಲ್ಲಾ ಮೇಡಂ. ಇಲ್ಲಿ ಏನಾಗೇತಿ ಪಾ ಅಂದ್ರ. ಕಸಾ ಹಾಕು ಡಂಪಿಂಗ್ ಯಾರ್ಡ್ ಬಾಜುನ ಐತಿ. ಇಲ್ಲಿನ ಜನಕ್ಕ ನೊಣದ ಕಾಟ ಬಾಳ ಆಗೇತಿ. ಚುರುಮುರಿ ಭಟ್ಟಿ ಜನಕ್ಕಂತೂ ರಸ್ತೆ, ಚರಂಡಿದ ದೊಡ್ಡ ಸಮಸ್ಯೆ ಆಗೇತಿ. ಕಸದ ಗಾಡಿಯಂತೂ ಬರೋದೆ ಇಲ್ಲಂತ. ಜನ್ನತನಗರ ಮೂರನೇ ಕ್ರಾಸ್‌ನ್ಯಾಗ ರಸ್ತೆದಾಗ ಒಂದ ದೊಡ್ಡ ತೆಗ್ಗ ಬಿದ್ದೈತಿ. ರಾತ್ರಿ ಟೈಮ್‌ನ್ಯಾಗ ಇಲ್ಲಿ ಬಾಳ ಅನಾಹುತಾನೂ ಆಗ್ಯಾವಂತ. ಇನ್ನ ಚರಂಡಿಗಳು ಕಸದಿಂದ ತುಂಬ್ಯಾವ. ನೀರು ಹರದು ಹೋಗವಲ್ದು. ಇದರಿಂದ ಸೊಳ್ಳಿ ಕಾಟ ಬಾಳ ಆಗೇತಿ. ಕಾರ್ಪೋರೇಟರ್ ಆದ ನೀವು ಏನ್ ಮಾಡಾಕತ್ತೀರಿ ಅನ್ನೋದು ಇಲ್ಲಿನ ಜನರ ಪ್ರಶ್ನೆ ಆಗೇತಿ ನೋಡ್ರಿ.
ಬಿಲ್‌ಕಿಸ್ ಬಾನು ಕಾರ್ಪೋರೇಟರ್ ಆದ್ರೂ ಅವರ ಮನಿಯಾವ್ರ ಆದ ಆಸ್ಗರ್‌ಅಲಿ ಮುಲ್ಲಾ ಅವರ ಅಧಿಕಾರ ನಡಸ್ತಾರಂತ. ಕೇಳಿದ್ರಲ್ಲ. ಇದು ಇಲ್ಲಿನ ಜನರ ದೊಡ್ಡ ಸಮಸ್ಯೆ. ಮುಲ್ಲಾ ಮೇಡಂ ಅವರು ತಮಗ ಬಂದ 50 ಲಕ್ಷ ಅನುದಾನದಾಗ 40 ಲಕ್ಷ ಇಲ್ಲೇ ಹಾಕೇನಿ ಅಂತಾರ. ಅಲ್ಲಿನ ಜನ ಮಾಡು ಆರೋಪ ಸುಳ್ಳು ಅಂತಾರ. ನೋಡುಣ ಅವರ ಇದರ ಬಗ್ಗೆ ಏನ ಹೇಳ್ತಾರೋ ಅನ್ನೋದನ್ನ ಕಾದು ನೋಡುಣಂತ. ಇದು ವಾರ್ಡ್ ನಂಬರ್ 22ರ ಸಮಸ್ಯೆ ಆದ್ರ ಮತ್ತೊಂದು ವಾರ್ಡಿನ್ ಸಮಸ್ಯೆ ತುಗೊಂಡ ಮತ್ತ ನಿಮ್ಮ ಮುಂದ ಬರತೇವಿ.
Kshetra Samachara
25/09/2022 01:21 pm