ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಿಂದ ನಮ್ಮ ವಠಾರಗಳೆಲ್ಲ ಸ್ಮಾರ್ಟ್ ಆಗುತ್ತೆ ಅಂದುಕೊಂಡವರು ಈಗ ಮನೆ ಬಿಟ್ಟು ಮಠ ಸೇರುವಂತಾಗಿದೆ. ಪಾಲಿಕೆಯ ನಿಷ್ಕಾಳಜಿಯಿಂದ ಜನರು ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಅಷ್ಟಕ್ಕೂ ಏನಿದು ಸಮಸ್ಯೆ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...
ಹೀಗೆ ಮನೆಯ ಮುಂದೆ ಕೆರೆಯಂತೆ ನಿಂತಿರುವ ನೀರು. ಮನೆಗೆ ಬೀಗ ಹಾಕಿ ಮನೆ ಬಿಟ್ಟಿರುವ ಜನರು.. ಈ ದೃಶ್ಯಗಳಿಗೆಲ್ಲ ಸಾಕ್ಷಿಯಾಗಿರುವುದು ಹುಬ್ಬಳ್ಳಿಯ ವಿದ್ಯಾನಗರ. ಹೌದು..ವಾರ್ಡ್ ನಂಬರ್ 47 ರಲ್ಲಿ ಬರುವ ವಿದ್ಯಾನಗರದಲ್ಲಿ ಸುಮಾರು ದಿನಗಳಿಂದ ಒಳಚರಂಡಿ ನೀರು ಮನೆಗೆ ಹೊಕ್ಕು ಮನೆ ಮಂದಿಯೆಲ್ಲ ಮನೆ ಬಿಟ್ಟು ಮಠ ಸೇರುವಂತಾಗಿದೆ. ಇಷ್ಟು ದಿನ ನಾವೆಲ್ಲರೂ ಮನೆಗೆ ಮಳೆ ನೀರು ನುಗ್ಗಿರುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಚರಂಡಿ ನೀರು ಮನೆಗೆ ನುಗ್ಗಿದ್ದು, ಮನೆಯ ಸದಸ್ಯರು ಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ಆಶ್ರಯ ಪಡೆಯುವಂತಾಗಿದೆ. ಅಲ್ಲದೇ ಬಹುತೇಕರು ಆಸ್ಪತ್ರೆಯಲ್ಲಿ ದಾಖಲಾಗಿರುವುದು ನಿಜಕ್ಕೂ ಪಾಲಿಕೆ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಇನ್ನು ಸಮಸ್ಯೆ ಬಗ್ಗೆ ಇಲ್ಲಿನ ಜನರೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ನೋಡಿ...
ಹಲವು ದಿನಗಳಿಂದ ಈ ಸಮಸ್ಯೆ ಬಗೆಹರಿಸುವಂತೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಇಲ್ಲಿನ ಹಿಂದಿನ ಕಾರ್ಪೊರೇಟರ್ ಹಾಗೂ ಈಗಿನ ಚುನಾಯಿತ ಕಾರ್ಪೊರೇಟರ್ ಮೂಕ ಪ್ರೇಕ್ಷಕರಂತೆ ಉಳಿದುಬಿಟ್ಟಿದ್ದಾರೆ. ಕಳೆದ ಸುಮಾರು ಐದಾರು ವರ್ಷಗಳಿಂದ ಇಲ್ಲಿನ ಜನರು ಇಂತಹ ಸಮಸ್ಯೆ ಅನುಭವಿಸುತ್ತಿದ್ದು, ಸಮಸ್ಯೆ ಎದುರಾದ ಸಮಯದಲ್ಲಿ ಮನೆ ಬಿಟ್ಟು ಮಠ ಸೇರುವಂತಾಗಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿನಗರಕ್ಕೆ ಅದೆಷ್ಟು ಯೋಜನೆ ಬಂದರೂ ಕೂಡ ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರು ಸೂಕ್ತ ಕ್ರಮಗಳನ್ನು ಜರುಗಿಸಿ ಇಲ್ಲಿನ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ.
Kshetra Samachara
17/05/2022 02:01 pm