ಧಾರವಾಡ: ಧಾರವಾಡ ಜಿಲ್ಲೆಯ ಕೆಲ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಫೋನ್ ಕರೆಗೆ ಸ್ಪಂದನೆ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಯಾವ್ಯಾವ ಅಧಿಕಾರಿಗಳು ಈ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬುದನ್ನು ನೋಡಿ ಅವರಿಗೆ, ಫೋನ್ ಕರೆಗಳನ್ನು ಸ್ವೀಕರಿಸಿ ಸಾರ್ವಜನಿಕರಿಗೆ ಸ್ಪಂದಿಸುವಂತೆ ಲಿಖಿತವಾಗಿ ಆದೇಶ ಮಾಡಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಸಚಿವ ಹಾಲಪ್ಪ ಆಚಾರ್ ಸೂಚನೆ ನೀಡಿದರು.
ಸುದ್ದಿಗೋಷ್ಠಿಯಲ್ಲೇ ಈ ರೀತಿ ಆದೇಶ ಮಾಡಿದ ಸಚಿವರು, ಎಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳ ಹಿಡಿತವಿರಬೇಕು. ಆ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು ಆ ರೀತಿ ಡಿಸಿ ಅವರು ನೋಡಿಕೊಳ್ಳಬೇಕು ಎಂದರು.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ 702 ಜನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಕಿಮ್ಸ್‌ನಲ್ಲಿ ಸಿಬ್ಬಂದಿಯೇ ಇಲ್ಲ ಎಂಬ ಆಪಾದನೆಗಳು ಕೇಳಿ ಬಂದಿದ್ದವು. ಹೀಗಾಗಿ ಸರ್ಕಾರ ಕೂಡ ಇದೀಗ ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಿದ್ದು, ಶೀಘ್ರವೇ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಬೀಜ, ಗೊಬ್ಬರಕ್ಕೆ ಕೊರತೆಯುಂಟಾಗಿಲ್ಲ. ಈಗಾಗಲೇ ಬಿತ್ತನೆಯಾಗಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ ಎಂದರು.
ಕೋವಿಡ್ ಎರಡನೇ ಹಂತದ ಲಸಿಕೆ ನೀಡುವಲ್ಲಿ ಧಾರವಾಡ ಜಿಲ್ಲೆ ಪ್ರಗತಿ ಸಾಧಿಸಿದೆ. 15 ರಿಂದ 17 ವರ್ಷದ ಮಕ್ಕಳಿಗೂ ಲಸಿಕೆ ನೀಡಲಾಗಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಕಿಮ್ಸ್‌ನಲ್ಲಿ 2 ಸಾವಿರ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅವಳಿನಗರದಲ್ಲಿ 63 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ ಇನ್ನು ಕೇವಲ 19 ಕಾಮಗಾರಿಗಳು ಮಾತ್ರ ಬಾಕಿ ಉಳಿದಿವೆ. ಅವುಗಳನ್ನೂ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಬೂಸ್ಟರ್ ಡೋಸ್‌ಗೆ ಕೊರತೆ ಇಲ್ಲ. ಯಾವ ಖಾಸಗಿ ಆಸ್ಪತ್ರೆ ಅಗತ್ಯತೆಗೆ ಅನುಗುಣವಾಗಿ ಆ ಡೋಸ್‌ನ್ನು ನೀಡಲು ಮುಂದೆ ಬರುತ್ತವೆ. ಅವುಗಳಿಗೆ ಬೂಸ್ಟರ್ ಡೋಸ್ ಪೂರೈಕೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Kshetra Samachara
21/06/2022 03:45 pm