ಹುಬ್ಬಳ್ಳಿ: ಕೇಂದ್ರ ಸರ್ಕಾರ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲೆಡೆಯೂ ರಾಷ್ಟ್ರೀಯ ಧ್ವಜ ಹಾರಿಸುವ ಹಾಗೂ ಸಾಮಾಜಿಕ ಜಾಲತಾಣದ ಗ್ರೂಪ್ ಪ್ರೊಫೈಲ್ ಫೋಟೋ ಕೂಡ ರಾಷ್ಟ್ರೀಯ ಧ್ವಜವೇ ಇರಬೇಕು ಎಂದು ಮನವಿ ಮಾಡಿದ್ದರೂ ಕೂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈ ನಿರ್ಧಾರವನ್ನು ಧಿಕ್ಕರಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಪಾದಯಾತ್ರೆ ಮೂಲಕ ಆರ್‌ಎಸ್‌ಎಸ್ ಕಛೇರಿಗೆ ಭೇಟಿ ನೀಡಿ ರಾಷ್ಟ್ರೀಯ ಧ್ವಜ ವಿತರಣೆ ಮಾಡುವ ಮೂಲಕ ರಾಷ್ಟ್ರೀಯತೆಯನ್ನು ಮನವರಿಕೆ ಮಾಡಿದರು.
ಹುಬ್ಬಳ್ಳಿಯ ಕೇಶವಕುಂಜಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದ ತಂಡ ಭೇಟಿ ನೀಡಿ ರಾಷ್ಟ್ರೀಯ ಧ್ವಜವನ್ನು ನೀಡಲಾಯಿತು. ಈಗಾಗಲೇ ಖಾದಿ ಉಳಿವಿಗಾಗಿ ಹೋರಾಟ ನಡೆಸಿರುವ ಕಾಂಗ್ರೆಸ್ ಪಕ್ಷ ಈಗ ಆರ್‌ಎಸ್‌ಎಸ್ ಕಚೇರಿಯಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಧ್ವಜಕ್ಕೆ ಗೌರವ ಸಮರ್ಪಣೆ ಮಾಡುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರದ ಆದೇಶದಂತೆ ಕಳೆದ ಏಳು ದಿನಗಳಿಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಭಾವಚಿತ್ರವನ್ನು ಪ್ರೊಫೈಲ್ ಪಿಕ್ಚರ್ ಆಗಿ ಪ್ರದರ್ಶಿಸಿದ್ದಾರೆ. ಆದರೆ ಈಗಿನವರೆಗೂ ಆರ್‌ಎಸ್‌ಎಸ್‌ನವರು ತಮ್ಮ ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ಭಗವಾ ಧ್ವಜವೇ ಇಟ್ಟುಕೊಂಡಿದ್ದಾರೆ. ಈಶ್ವರಪ್ಪನವರು ದೇಶದ ತ್ರಿವರ್ಣವನ್ನು ಬದಲಾಯಿಸಿ ಭಗವಾ ಧ್ವಜವೇ ನಮ್ಮ ರಾಷ್ಟ್ರಧ್ವಜ ಎಂದು ಹೇಳಿದ್ದರ ಬೆನ್ನಲ್ಲೇ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಗಂಭೀರವಾಗಿ ಆರೋಪಿಸಿದ್ದಾರೆ.
ಇನ್ನೂ ಪ್ರಾರಂಭದಲ್ಲಿ ನಮಗೆ ಬೇಡ ನಮ್ಮ ಬಳಿ ರಾಷ್ಟ್ರಧ್ವಜ ಇದೆ ಎಂದು ಸಂಘದ ಪ್ರಮುಖರು ಕಲೆ ಬಿದ್ದಿರುವ ರಾಷ್ಟ್ರ ಧ್ವಜವನ್ನು ತಂದು ಕಾಂಗ್ರೆಸ್ಸಿಗರಿಗೆ ತೋರಿಸಿದರು. ಇದಕ್ಕೆ ತಕರಾರು ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೊಳೆ ಆಗಿರುವ ಧ್ವಜವನ್ನು ಧ್ವಜಾರೋಹಣ ಮಾಡಬಾರದು ಎಂದು ತಿಳಿ ಹೇಳಿದರು. ಆಗ ಆರ್‌ಎಸ್‌ಎಸ್‌ನವರು ನಾವು ಈ ಧ್ವಜವನ್ನು ತೊಳೆದು ಧ್ವಜಾರೋಹಣ ಮಾಡುತ್ತೇವೆ ಎಂದು ಹೇಳಿದರು. ಆಗ ಮತ್ತೆ ತಿಳಿಸಿದ ಕಾಂಗ್ರೆಸ್‌ನವರು ಧ್ವಜದ ಮೇಲೆ ಕೊಳೆ ಬಿದ್ದರೆ ಧ್ವಜವನ್ನು ತೊಳೆಯಬಾರದು ಎಂದು ಧ್ವಜ ಸಂಹಿತೆ ಹೇಳುತ್ತದೆ ಎಂದು ತಿಳಿಸಿದರು.
Kshetra Samachara
10/08/2022 03:20 pm