ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಗಳಿಬ್ಬರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುವುದರೊಂದಿಗೆ ತಾರಕಕ್ಕೇರುತ್ತಿದೆ.
ಹೌದು! ಇತ್ತೀಚೆಗೆ ಅಂಕೋಲಾ ತಾಲೂಕಿನ ಮಾಸ್ತಿಕಟ್ಟೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೃಷಿ ವಿಶ್ವವಿದ್ಯಾಲಯಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಸಿಂಗನಾಥ್ ಹಾಗೂ ರೇಖಾ ಕೊಕಟನೂರ ಎಂಬುವವರು
ಸಾವಿಗೀಡಾಗಿದ್ದಾರೆ. ಈ ಅಪಘಾತವನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದ್ದು, ವಿಶ್ವವಿದ್ಯಾಲಯದ ಕುಲಪತಿಗಳ ಆಪ್ತ ಕಾರ್ಯದರ್ಶಿ ಮುಲ್ಲಾ ಅವರೇ ಈ ಕೃತ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಶನಿವಾರ ವಿವಿಯಲ್ಲಿ ನಡೆದ ಘಟಿಕೋತ್ಸವದ ವೇಳೆಯೂ ಈ ಪ್ರಕರಣ ಸದ್ದು ಮಾಡಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಉಡಾಫೆ ಉತ್ತರ ನೀಡಿ ಕೈ ತೊಳೆದುಕೊಂಡು ಹೋಗಿದ್ದರು. ಯಾವಾಗ ಸಚಿವರ ಹೇಳಿಕೆ ಸುದ್ದಿಯಾಯಿತೋ ಎಚ್ಚೆತ್ತುಕೊಂಡ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ವಿವಿಗೆ ಮುತ್ತಿಗೆ ಹಾಕಿ ಕೃಷಿ ಸಚಿವರಿಗೆ ಬಿಸಿ ಮುಟ್ಟಿಸಿದರು. ನಂತರ ಮಾತು ಬದಲಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ ಈ ಪ್ರಕರಣದ ಸಂಬಂಧ ಗೃಹ ಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಅಪಘಾತಕ್ಕೀಡಾದ ಮಹಿಳಾ ಉದ್ಯೋಗಿಗಳನ್ನು ಅದೇ ಕೃಷಿ ವಿವಿಯಲ್ಲಿ ಕೆಲಸ ಮಾಡುವ ಕುಲಪತಿಗಳ ಆಪ್ತ ಕಾರ್ಯದರ್ಶಿ ಮನಸೂರ ಅಹ್ಮದ್ ಮುಲ್ಲಾ ತಮ್ಮ ಕಾರಿನಲ್ಲಿ ಹೆದರಿಸಿ, ಬೆದರಿಸಿ, ಬ್ಲ್ಯಾಕ್ ಮೇಲ್ ಮಾಡಿ ಕರೆದುಕೊಂಡು ಹೋಗಿರುವ ಸಂಶಯವಿದೆ. ಅಪಘಾತದಲ್ಲಿ ಮೃತಪಟ್ಟ ಈ ಹೆಣ್ಣು ಮಕ್ಕಳು ತಮ್ಮ ತಂದೆ, ತಾಯಂದಿರಿಗೆ ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯಕ್ಕೆ ಕೆಲಸದ ಮೇಲೆ ಹೋಗುತ್ತೇವೆ ಎಂದು ಹೇಳಿ ಹೋಗಿದ್ದರು. ಆದರೆ, ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಮಾಸ್ತಿಕಟ್ಟೆ ಬಳಿ ನಡೆದ ಅಪಘಾತದಲ್ಲಿ ಇವರು ಸಾವನ್ನಪ್ಪಿದ್ದಾರೆ. ಬಾಗಲಕೋಟೆಗೆ ಹೋಗುವವರು ಅಂಕೋಲಾದ ಕಡೆಗೆ ಹೋಗಿದ್ದು ಏಕೆ? ಎಂಬ ಸಂಶಯ ಹಾಗೂ ಇವರನ್ನು ಕೊಲೆ ಮಾಡುವ ಅಥವಾ ಅತ್ಯಾಚಾರವೆಸಗುವ ಉದ್ದೇಶದಿಂದಲೇ ಕರೆದುಕೊಂಡು ಹೋಗಿರಬಹುದು ಎಂಬ ಸಂಶಯ ಮೂಡಿದೆ ಎಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮೊದಲೇ ಆರೋಪಿಸಿದ್ದಾರೆ.
ಸದ್ಯ ಈ ಪ್ರಕರಣದ ಕಾವು ಏರುತ್ತಿದ್ದು, ತನಿಖೆ ನಡೆಸುವುದಾಗಿ ಸಚಿವರು ಹೇಳಿದ್ದಾರೆ. ಈ ಪ್ರಕರಣದ ತನಿಖೆ ನಡೆದಿದ್ದೇ ಆದಲ್ಲಿ, ದೊಡ್ಡ ದೊಡ್ಡ ಕುಳಗಳ ಕೈವಾಡ ಇರುವುದು ಗೊತ್ತಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಚಿವರು ಹಾಗೂ ಸರ್ಕಾರ ಇದನ್ನು ಯಾವ ರೀತಿಯ ತನಿಖೆಗೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
27/02/2021 09:45 pm