ಧಾರವಾಡ: ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಗೌರಿಪಾಳ್ಯದಲ್ಲಿ ಚಂದ್ರು ಎಂಬ ಹಿಂದೂ ಯುವಕನ ಹತ್ಯೆ ನಡೆದಿದ್ದು, ಈ ಹತ್ಯೆ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಹತ್ಯೆ ನಡೆದಿದ್ದು, ಮುಸ್ಲಿಂರು ಆ ಯುವಕನನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸಿಸಿ ಟಿವಿಯಲ್ಲಿ ದೃಶ್ಯಾವಳಿಗಳು ಲಭ್ಯವಾಗಿವೆ. ಈ ಹತ್ಯೆಗೆ ಕಾರಣ ಬೇರೆ ಬೇರೆ ಇವೆ. ಚಂದ್ರು ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ತಂಟೆ ನಡೆದಿದೆ. ಮತ್ತೊಂದು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಅದಕ್ಕೆ ಏನೇ ಕಾರಣ ಇರಲಿ ಹತ್ಯೆ ಮಾಡೋದೇ ಕೆಲಸವೇ? ಈ ದೇಶದಲ್ಲಿ ಪೊಲೀಸ್ ವ್ಯವಸ್ಥೆ ಇದೆ. ನ್ಯಾಯಾಲಯ ಇದೆ. ದೂರು ಕೊಡಬಹುದಿತ್ತು. ಚಂದ್ರು ದಲಿತ ಯುವಕ ಎಂದು ಗೃಹ ಮಂತ್ರಿಗಳು ಹೇಳಿದ್ದಾರೆ. ಯಾರೇ ಆಗಲಿ ಒಟ್ಟಾರೆ ಹಿಂದೂ ಯುವಕನ ಹತ್ಯೆಯಾಗಿದೆ. ಪೊಲೀಸ್ ಇಲಾಖೆ ಇದನ್ನು ಮುಚ್ಚಿ ಹಾಕದೇ ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಕೊಲೆ ಮಾಡುವ ಮುಸ್ಲಿಂರ ಮನಸ್ಥಿತಿ ಬದಲಾಗಬೇಕು. ಡಿಜೆ ಹಳ್ಳಿಯಲ್ಲಿ ಶಾಸಕರ ಮನೆಗೆ ಬೆಂಕಿ ಹಚ್ಚಿದಾಗಲೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹರ್ಷನ ಕೊಲೆ ನಂತರ ಚಂದ್ರು ಎಂಬ ಮತ್ತೊಬ್ಬ ಯುವಕನ ಕೊಲೆ ನಡೆದಿದೆ. ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇದರ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಮುತಾಲಿಕ್ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/04/2022 04:56 pm