ಹುಬ್ಬಳ್ಳಿ:ಅವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮನೆಯವರ ವಿರೋಧದ ನಡುವೆಯೂ ಯುವತಿ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಅತ್ತ ಮಗ-ಸೊಸೆಯನ್ನು ಮನೆ ತುಂಬಿಸಿಕೊಂಡ ಯುವಕನ ಪಾಲಕರು ಅದ್ದೂರಿಯಾಗಿ ಆರತಕ್ಷತೆ ನೆರವೇರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಯುವತಿಯನ್ನೇ ಕಿಡ್ನ್ಯಾಪ್ ಮಾಡಲಾಗಿದೆ. ಗಂಡನೊಂದಿಗೆ ತನ್ನ ಅಪ್ಪ-ಅಮ್ಮನ ಆಶೀರ್ವಾದ ಪಡೆಯಲೆಂದು ಹೋದ ಯುವತಿಯನ್ನು ಹುಬ್ಬಳ್ಳಿಯ ಕಾರ್ಪೋರೇಟರ್ ಸೇರಿ ಮೂವರು ಅಪಹರಿಸಿದ್ದಾರೆ ಎಂದ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಹೌದು..ಪತ್ನಿ ಸಹನಾ ಹಿರೆಕೇರೂರ ಅವರನ್ನು, ಅವರ ತಂದೆ, ತಾಯಿ ಹಾಗೂ ಚಿಕ್ಕಪ್ಪನ ಮಗನಾದ ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಅವರು ಅಪಹರಣ ಮಾಡಿದ್ದಾರೆ ಎಂದು ಪತಿ ನಿಖಿಲ್ ದಾಂಡೇಲಿ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
2021ರ ನವೆಂಬರ್‌ನಲ್ಲಿ ಕುಂದಗೋಳದ ನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದು, ಇದೇ 26ರಂದು ನಗರದ ಕ್ಯೂಬಿಕ್ಸ್ ಹೋಟೆಲ್‌ನಲ್ಲಿ ಆರತಕ್ಷತೆ ಇಟ್ಟುಕೊಳ್ಳಲಾಗಿತ್ತು. ಪತ್ನಿಯ ತಂದೆ ಶಿವು ಹಿರೇಕೆರೂರ ಮತ್ತು ತಾಯಿ ಜಯಲಕ್ಷ್ಮಿ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಬರುವಂತೆ ಒಪ್ಪಿಸಲು, ಶುಕ್ರವಾರ ಬೆಳಿಗ್ಗೆ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನ ಬಾಟಾ ಷೋರೂಂ ಬಳಿ ಬಂದಾಗ, ಚೇತನ ಅವರು ಒಂದು ತಾಸಿನಲ್ಲಿ ಕಳುಹಿಸಿಕೊಡುವುದಾಗಿ ಪತ್ನಿಯನ್ನು ಕರೆದುಕೊಂಡು ಹೋಗಿದ್ದರು. ಒಂದು ತಾಸಿನ ನಂತರ ಪತ್ನಿ ಮರಳಿ ಬರದ ಹಿನ್ನೆಲೆಯಲ್ಲಿ ಅವಳ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಪತ್ನಿಯ ತಂದೆ–ತಾಯಿ ಹಾಗೂ ಚೇತನ ಅವಳನ್ನು ಅಪಹರಿಸಿದ್ದಾರೆ ಎಂದು ನಿಖಿಲ್ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಇನ್‌ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ, ಆರೋಪಿ ಚೇತನ ಹಿರೇಕೆರೂರ ಅವರನ್ನು ಶನಿವಾರ ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಹೆಗ್ಗೇರಿ, ಮಾರುತಿ ನಗರ, ಹೊಸೂರು ನಿವಾಸಿಗಳು ಹಾಗೂ ಆಟೊ ಚಾಲಕರು ಸೇರಿ ನೂರಕ್ಕೂ ಹೆಚ್ಚು ಮಂದಿ ಪೊಲೀಸ್ ಠಾಣೆ ಮುತ್ತಿಗೆ ಹಾಕಿ ಚೇತನ ಬಿಡುಗಡೆಗೆ ಆಗ್ರಹಿಸಿದರು.
ಚೇತನ ವಿರುದ್ಧ ಪ್ರಕರಣ ದಾಖಲಾಗಿದೆ. ಕಾನೂನು ಪ್ರಕಾರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದು ಬರಲಿದೆ. ಅಪಹರಣವಾಗಿದೆ ಎಂದು ಸಹನಾ ಅವರ ಪತಿ ದೂರು ನೀಡಿದ್ದು, ಸಹನಾ ಪತ್ತೆಯಾಗಿ ಅವರ ಹೇಳಿಕೆ ಏನೆಂಬುದರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಚೇತನ ಬೆಂಬಲಿಗರಿಗೆ ಇನ್‌ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ಹೇಳಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/06/2022 12:45 pm