ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠ. ಈ ಮಠದ ಹೆಸರು ಕೇಳುತ್ತಲೇ ಎಲ್ಲರಲ್ಲಿಯೂ ಒಂದು ದೈವಿಕ ಭಾವನೆ ಹುಟ್ಟುವುದು ಖಂಡಿತ. ಆದರೆ ಈ ಮಠದಲ್ಲಿ ಈಗ ಅವ್ಯವಹಾರದ ಆರೋಪವೊಂದು ಕೇಳಿ ಬಂದಿದೆ. ಇದರಿಂದ ಈ ಮಠದ ಗೌರವಕ್ಕೆ ದಕ್ಕೆ ಬರುವುದಂತೂ ಸತ್ಯ. ಹಾಗಿದ್ದರೆ ಏನಿದು ಅವ್ಯವಹಾರದ ಆರೋಪ ಅಂತೀರಾ ಈ ಸ್ಟೋರಿ ನೋಡಿ..
ಸಿದ್ಧಾರೂಢ ಮಠದ ಸೋಲಾರ್ ಪ್ಯಾನೆಲ್ ಹೆಸರಿನಲ್ಲಿ ಅವ್ಯವಹಾರದ ಆರೋಪವೊಂದು ಕೇಳಿಬಂದಿದೆ. ಒಟ್ಟು 57 ಲಕ್ಷ ರೂಪಾಯಿ ವೆಚ್ಚದಲ್ಲಿ ಬೆಳಗಾವಿ ಕಂಪನಿಯೊಂದಕ್ಕೆ ಟೆಂಡರ್ ನೀಡಿದ್ದು, ಟೆಂಡರ್ ಅನಧಿಕೃತವಾಗಿದೆ. ಅಲ್ಲದೆ ಇವರಿಗೆ ಹಣ ನೀಡಿರುವುದು ಕೂಡ ಅನಧಿಕೃತವಾಗಿದೆ ಎಂಬುವಂತ ಗಂಭೀರವಾದ ಆರೋಪ ಕೇಳಿಬಂದಿದೆ.
ಈ ಹಿಂದೆ ಇದ್ದ ಅಧ್ಯಕ್ಷರಾದ ಡಿ.ಡಿ.ಮಾಳಗಿಯವರು ಸ್ವ ಹಿತಾಸಕ್ತಿಯಿಂದ ತಮಗೆ ಬೇಕಾದವರಿಗೆ ಟೆಂಡರ್ ನೀಡಿದ್ದು, ಇದರಲ್ಲಿ ಅನಧಿಕೃತವಾಗಿ 52 ಲಕ್ಷ ಹಣ ವರ್ಗಾವಣೆ ಮಾಡಿದ್ದಾರೆ ಎಂಬುವಂತ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ವೈರಲ್ ಆಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಮಾಡಲಾಗಿದೆ. ಆದರೆ ಆರು ಸೋಲಾರ್ ಪ್ಯಾನೆಲ್‌ಗಳನ್ನು ಬೆಳಗಾವಿಯ ಯುನಿಸನ್ ಸೋಲಾರ್ ಕಂಪನಿಯು ತೆಗೆದುಕೊಂಡು ಹೋಗಿದೆ. ಕಾಮಗಾರಿ ಅಪೂರ್ಣಗೊಂಡಿದ್ದು, ಬೇಕಾಬಿಟ್ಟಿಯಾಗಿ ಸಾರ್ವಜನಿಕರ ಹಣವನ್ನು ಇಲ್ಲಿನ ಅಧ್ಯಕ್ಷರಾಗಿದ್ದ ಡಿ.ಡಿ.ಮಾಳಗಿ ವ್ಯಯಮಾಡಿ ಅವ್ಯವಹಾರ ಮಾಡಿದ್ದಾರೆ ಎಂಬುವಂತ ಆರೋಪ ಕೇಳಿ ಬಂದಿದೆ. ಆದರೆ ಈ ಆರೋಪವನ್ನು ಮಾತ್ರ ಸಿದ್ಧಾರೂಢ ಮಠದ ಆಡಳಿತ ಮಂಡಳಿ ಒಪ್ಪುತ್ತಿಲ್ಲ.
ಇನ್ನೂ ಸಿದ್ಧಾರೂಢರ ಮಠದಲ್ಲಿಯೇ ಮೊಟ್ಟಮೊದಲ ಬಾರಿಗೆ ಇಂತಹದೊಂದು ಅವ್ಯವಹಾರದ ಆರೋಪ ಕೇಳಿ ಬಂದಿದೆ. ಅಲ್ಲದೇ ಏಕಾಏಕಿ ಅಧ್ಯಕ್ಷರಾಗಿದ್ದ ಡಿ.ಡಿ.ಮಾಳಗಿಯವರು ರಾಜೀನಾಮೆ ನೀಡಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಇಲ್ಲಿನ ಆಡಳಿತ ಮಂಡಳಿಯವರು, ಮಾಳಗಿಯವರು ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದಾರೆ ವಿನಃ ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುವಂತ ಮಾಹಿತಿ ನೀಡಿದ್ದು, ಈಗಾಗಲೇ ಸೋಲಾರ್ ಪ್ಯಾನೆಲ್ ಜೋಡಣೆಗೆ ಮುಖ್ಯ ಆಡಳಿತಾಧಿಕಾರಿಗಳ ಪತ್ರ ಸಂಖ್ಯೆ 1885/ 2018ರ ಪ್ರಕಾರ 57,90,000 ರೂಪಾಯಿಗೆ ಟೆಂಡರ್ ನೀಡಿದ್ದು, ಏಳು ಕಂತುಗಳಲ್ಲಿ ಸುಮಾರು 52,50,000 ಹಣವನ್ನು ನೀಡಲಾಗಿದೆ. ಇಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆಡಳಿತ ಮಂಡಳಿಯ ಕಾರ್ಯವೈಖರಿಗೆ ಮಸಿ ಬಳೆಯಲು ಹುನ್ನಾರ ಎನ್ನುತ್ತಾರೆ ಉಪಾಧ್ಯಕ್ಷ ಮಣ್ಣೂರ.
ಒಟ್ಟಿನಲ್ಲಿ ಗುರು ಪರಂಪರೆಯ ಸಿದ್ಧಾರೂಢರ ಮಠದಲ್ಲಿ ಆಧ್ಯಾತ್ಮಿಕತೆಗೆ ಮಾತ್ರವೇ ಜಾಗೆಯಿತ್ತು. ಆದರೆ ಈಗ ಅವ್ಯವಹಾರದ ಆರೋಪ ಸುತ್ತಿಕೊಂಡಿದೆ. ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಆರೋಪ ಕೇಳಿ ಬರುತ್ತಿದೆ. ಆದರೆ ಆಡಳಿತ ಮಂಡಳಿ ಮಾತ್ರ ಯಾವುದೇ ಅವ್ಯವಹಾರ ನಡದೆಯಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆದು ಯಾರು ತಪ್ಪಿತಸ್ಥರೋ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವ ಕಾರ್ಯ ನಡೆಯಬೇಕಿದೆ.
Kshetra Samachara
07/05/2022 04:34 pm