ಧಾರವಾಡ: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ತನಿಖೆ ನಡೆಯುತ್ತಿರುವಾಗಲೇ, ಧಾರವಾಡದ ವ್ಯಕ್ತಿಯೊಬ್ಬರು 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಬಗ್ಗೆ ಸಂಶಯ ವ್ಯಕ್ತಪಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ರಮೇಶ ತನಿಖೆದಾರ ಎಂಬುವವರು ಈ ಹುದ್ದೆಗಾಗಿ ನೇಮಕಾತಿ ಬಯಸಿ ಮುಖ್ಯ ಪರೀಕ್ಷೆ ಬರೆದು ಸಂದರ್ಶನ ಕೊಟ್ಟು, ಆಯ್ಕೆಯಿಂದ ವಂಚಿತರಾಗಿದ್ದಾರೆ. ಹೀಗಾಗಿ ದಾಖಲೆಗಳ ಮೂಲಕ ಕೆಪಿಎಸ್ಸಿ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. 2015ರ ಸಾಲಿನ 428 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಗಾಗಿ 2017ರ ಜೂನ್ ನಲ್ಲಿ ಅಧಿಸೂಚನೆ ಹೊರಡಿಸಿ, ಅದೇ ವರ್ಷದ ಆಗಸ್ಟ್ನಲ್ಲಿ ಪೂರ್ವಭಾವಿ ಪರೀಕ್ಷೆ ಹಾಗೂ ಡಿಸೆಂಬರ್ ನಲ್ಲಿ ಮುಖ್ಯ ಪರೀಕ್ಷೆಯನ್ನು ಕೆಪಿಎಸ್ಸಿ ನಡೆಸಿತ್ತು. ನಂತರ 2019ರ ಅಕ್ಟೋಬರ್ ವರೆಗೆ ಸಂದರ್ಶನಗಳನ್ನು ನಡೆಸಿ ಡಿಸೆಂಬರ್ 23ರಂದು ತಾತ್ಕಾಲಿಕ ಆಯ್ಕೆ ಪಟ್ಟಿ, 2020ರ ಜನವರಿ 10ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಆದರೆ, ರಮೇಶ ಅವರ ಹೆಸರು ಇದರಲ್ಲಿ ಇರಲಿಲ್ಲ.
ಈ ಹಿಂದೆ 2014ರಲ್ಲಿ ಇದೇ ಹುದ್ದೆಗೆ ನಡೆದ ನೇಮಕಾತಿಗೂ ಇವರು ಪರೀಕ್ಷೆ ಬರೆದು ಸಂದರ್ಶನ ಎದುರಿಸಿದ್ದರು. ಈ ಸಲ ಹಿಂದಿಗಿಂತ ಕಡಿಮೆ ಅಂಕಗಳು ಬಂದಿದ್ದವು. ಹೀಗಾಗಿ ಫಲಿತಾಂಶ ಬಂದ ತಕ್ಷಣವೇ ಮಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯ ದೃಢೀಕೃತ ಪ್ರತಿಗಾಗಿ ಮಾಹಿತಿ ಹಕ್ಕು ಕಾಯಿದೆಯಡಿ ಕೆಪಿಎಸ್ ಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೆಲವೊಂದು ಕಾಯಿದೆಗಳ ಅಡಿಯಲ್ಲಿ ಅದನ್ನು ಕೊಡಲು ಸಾಧ್ಯವಿಲ್ಲ ಎಂದು ಆಯೋಗ ತಿಳಿಸಿತ್ತು. ಹೀಗಾಗಿ 2015ರಲ್ಲಿ ನಡೆದ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ಒಬ್ಬರ ಅಂಕ ಮತ್ತೊಬ್ಬರಿಗೆ ಹಾಕಿ ಮೆರಿಟ್ ನಲ್ಲಿ ಏರುಪೇರು ಮಾಡಿದ್ದಾರೆ ಎಂಬುದು ರಮೇಶ ಅವರ ಆರೋಪವಾಗಿದೆ.
Kshetra Samachara
06/05/2022 08:36 pm