ಹುಬ್ಬಳ್ಳಿ: ಸಂಗೀತಲೋಕದ ದಂತಕಥೆ, ಭಾರತೀಯ ಸಂಸ್ಕೃತಿಯ ಅನರ್ಘ್ಯರತ್ನ, ಭಾರತದ ನೈಟಿಂಗೇಲ್ , ವಿಶ್ವವಿಖ್ಯಾತ ಗಾಯಕಿ, ಭಾರತರತ್ನ ಪುರಸ್ಕೃತ ಸಪ್ತಸ್ವರಗಳ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನದಿಂದ ಭಾರತದ ಸಾರಸ್ವತ ಲೋಕದ ಮಹತ್ವದ ಯುಗದ ಅಂತ್ಯವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಂಬನಿ ಮಿಡಿದಿದ್ದಾರೆ.
ಗಾನ ಸರಸ್ವತಿಯಾಗಿದ್ದ ಲತಾ ಮಂಗೇಶ್ಕರ್ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಕನ್ನಡವೂ ಸೇರಿದಂತೆ ಭಾರತದ 36ಭಾಷೆಗಳಲ್ಲಿ ಹಾಗೂ ವಿದೇಶಿ ಭಾಷೆಗಳಲ್ಲಿಯೂ 30 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ತಮ್ಮ ಅಪ್ರತಿಮ ಗಾನ ಪ್ರತಿಭೆ ಮೂಲಕ ದೇಶ ವಿದೇಶಗಳ ಕೋಟ್ಯಾಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಲತಾದೀದಿ ಚಿರಸ್ಥಾಯಿಯಾಗಿದ್ದಾರೆ.
ಕೇವಲ ಚಲನಚಿತ್ರಗೀತೆಗಳಲ್ಲದೇ ಭಕ್ತಿಗೀತೆ, ದೇಶಪ್ರೇಮಗೀತೆ, ಭಾವಗೀತೆ , ಅಭಂಗ್, ಗಝಲ್ , ದೋಹೆ ಸೇರಿದಂತೆ ಸಂಗೀತದ ಎಲಾ ಪ್ರಕಾರಗಳಲ್ಲಿಯೂ ಸಂಗೀತ ಸುಧೆಹರಿಸಿ ತಮ್ಮಸ್ವರ ಮಾಧುರ್ಯದ ಮೂಲಕ ಗಾಯನಲೋಕವನ್ನು ಶ್ರೀಮಂತಗೊಳಿಸಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಬಸವರಾಜ ಹೊರಟ್ಟಿ ಶ್ಲಾಘಿಸಿದ್ದಾರೆ.
ಇಂತಹ ಶ್ರೇಷ್ಠ ಸಾಧಕರ ನಿಧನದಿಂದ ಸಂಗೀತ ಪ್ರೀಯರ ಮನದಲ್ಲಿ ಶೂನ್ಯ ಆವರಿಸಿದ್ದು, ಸಂಗೀತ ಲೋಕ ಬಡವಾಗಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಿ, ಕುಟುಂಬಸ್ಥರು ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದು ಬಸವರಾಜ ಹೊರಟ್ಟಿ ಪ್ರಾರ್ಥಿಸಿದ್ದಾರೆ.
Kshetra Samachara
06/02/2022 12:14 pm