ಧಾರವಾಡ: ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಹಾಗೂ ಎಸ್ಡಿಎಂ ಸಂಸ್ಥೆಯ ಉಪಾಧ್ಯಕ್ಷ ಡಾ.ನ.ವಜ್ರಕುಮಾರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗಣ್ಯರ ದಂಡೇ ಹರಿದು ಬಂದಿದೆ.
ಧಾರವಾಡದ ಜೆಎಸ್ಎಸ್ ಸಂಸ್ಥೆಯ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಸೇರಿದಂತೆ ಅನೇಕ ಗಣ್ಯರು ವಜ್ರಕುಮಾರ ಅವರ ಅಂತಿಮ ದರ್ಶನ ಪಡೆದುಕೊಂಡರು.
ಎಸ್ಡಿಎಂ ಸಂಸ್ಥೆ, ಜೆಎಸ್ಎಸ್ ಸಂಸ್ಥೆಯ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಜ್ರಕುಮಾರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಕೊಕ್ಕರ್ಣೆ ಅರಮನೆಯ ಭೋಜರಾಜಯ್ಯ ಹಾಗೂ ಕುತ್ಯಾರು ಅರಮನೆಗೆ ಸೇರಿದ ಚಂದ್ರಮತಿ ಅಮ್ಮನವರ ದ್ವಿತೀಯ ಪುತ್ರರಾಗಿ ಮೇ 29, 1939ರಂದು ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ವಜ್ರಕುಮಾರ ಜನಿಸಿದ್ದರು. ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಮುಗಿಸಿದ ಇವರು, ಎಂಜಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನವನ್ನು ಆರಂಭಿಸಿದರು.
1974 ರಲ್ಲಿ ಸುಮನ್ ಅವರೊಂದಿಗೆ ವಿವಾಹವಾಗಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ. ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಡಾ.ನ.ವಜ್ರಕುಮಾರ್ ಅವರು ತಮ್ಮ ಕ್ರಿಯಾಶೀಲತೆ ಹಾಗೂ ಕಾರ್ಯದಕ್ಷತೆಗಳಿಂದ ಜೆಎಸ್ಎಸ್ ಸಂಸ್ಥೆಯ ಕಾರ್ಯದರ್ಶಿಗಳಾಗಿ ಎಂಜಿನಿಯರಿಂಗ್, ದಂತ ಮಹಾವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದರು.
ಅವಿರತ ಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿ ಧಾರವಾಡದಲ್ಲಿ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದ ಕೀರ್ತಿಯ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದಾತರಾಗಿದ್ದರು. ಜೈನ ಸಮಾಜದ ಹಿರಿಯರು ಮಾರ್ಗದರ್ಶಕರೂ ಆಗಿ ಧಾರವಾಡ ಜೈನ್ ಮಿಲನ್ ಇದರ ಮಹಾಪೋಷಕರು, ಸ್ಥಾಪಕರೂ ಆಗಿ ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದರು.
Kshetra Samachara
02/09/2022 01:23 pm