ಧಾರವಾಡ: ಯಾವುದೇ ಕಾಯಕದಲ್ಲಿ ಕಲ್ಮಶ, ಸ್ವಾರ್ಥವಿಲ್ಲದೇ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದಾಗ ಅದು ಆತ್ಮತೃಪ್ತಿಯನ್ನು ನೀಡಿ ಸಾರ್ಥಕವಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಾಕ್ಷ ಡಾ. ಮಹೇಶ ಜೋಶಿ ಹೇಳಿದರು.
ನಗರದ ಕ್ಲಾಸಿಕ್ ಕೆ.ಎ.ಎಸ್. ಮತ್ತು ಐ.ಎ.ಎಸ್. ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕ್ಲಾಸಿಕ್ ಸಮೂಹ ಸಂಸ್ಥೆಗಳ ವತಿಯಿಂದ ನೀಡಲಾದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳು ಆ ಸ್ಫರ್ಧೆಗೆ ತಕ್ಕಂತೆ ತಮ್ಮನ್ನು ಅಣಿಗೊಳಿಸಿಕೊಳ್ಳಬೇಕು. ನ್ಯಾಯಯುತವಾದ ಸನ್ಮಾರ್ಗದ ಮೂಲಕ ಗುರಿ ತಲುಪಬೇಕು. ಅಧಿಕಾರಯುತ ಸ್ಥಾನಗಳಲ್ಲಿ ಕೇವಲ ಅಧಿಕಾರಿಗಳು ಕಾಣದೇ ಮಾನವೀಯ ಮೌಲ್ಯಗಳೂ ಸಹ ಗೋಚರಿಸಿ ಅಶಕ್ತರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಬದ್ಧತೆ ಮತ್ತು ನಂಬಿಕೆಯುತ ಸೇವೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ ಡಾ. ಮಹೇಶ ಜೋಶಿ ಹಾಗೂ ಧಾರವಾಡ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರನ್ನು ಸನ್ಮಾನಿಸಿ ಮಾತನಾಡಿದ, ಕ್ಲಾಸಿಕ್ ಸಮೂಹ ಸಂಸ್ಥೆಗಳ ಹಾಗೂ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದೇಶಕ ಲಕ್ಷ್ಮಣ ಎಸ್. ಉಪ್ಪಾರ ಅವರು, ಮಾತೃಭಾಷೆಯು ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುತ್ತದೆ. ಬದುಕಿನುದ್ದಕ್ಕೂ ನಮ್ಮೊಂದಿಗೆ ಬೆರೆತುಕೊಂಡು ನಮ್ಮ ಭಾವನೆಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸ್ಫರ್ಧಾಸ್ಪೂರ್ತಿ ಪ್ರಕಾಶಕಿ ರೇಣುಕಾ ಎಲ್. ಉಪ್ಪಾರ, ಜಿಲ್ಲಾ ಕ.ಸಾ.ಪ. ಗೌ. ಕಾರ್ಯದರ್ಶಿ ಡಾ. ಕೆ. ಎಸ್. ಕೌಜಲಗಿ, ಕ್ಲಾಸಿಕ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಮನೋಹರ ಕೆಂಚರಾಹುತ ಇತರರು ಉಪಸ್ಥಿತರಿದ್ದರು. ಕ್ಲಾಸಿಕ್ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಬಸವರಾಜ ಕುಪ್ಪಸಗೌಡರ ಸ್ವಾಗತಿಸಿ ನಿರೂಪಿಸಿದರು.
Kshetra Samachara
08/07/2022 11:57 am