ಧಾರವಾಡ: ಸಮುದಾಯದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಅತ್ಯಂತ ಅವಶ್ಯಕವಾಗಿವೆ. ಮಾನಸಿಕ ಆರೋಗ್ಯದ ಸುರಕ್ಷತೆಗೆ ಆದ್ಯತೆಯನ್ನು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯಕದರ್ಶಿ ಪುಷ್ಪಲತ ಸಿ.ಎಂ ಹೇಳಿದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಇವರ ಸಹಯೋಗದಲ್ಲಿ ಇಂದು ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮವನ್ನು ಎಲ್ಲರಿಗೂ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಒಂದು ಜಾಗತಿಕ ಆದ್ಯತೆಯನ್ನಾಗಿ ಮಾಡಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು.
ಜೀವನದಲ್ಲಿ ಮಾನಸಿಕ ನೆಮ್ಮದಿ ಇಂದಿನ ದಿನಮಾನಗಳಲ್ಲಿ ಮುಖ್ಯವಾಗಿದೆ. ಹಲವಾರು ಸಮಸ್ಯೆಗಳ ಮಧ್ಯೆ ಜನರು ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಂಡು ಹೋಗುವುದು ಸರಳವಲ್ಲ. ಮಾನಸಿಕ ಕಾಯಿಲೆಗಳ ಕುರಿತು ಮತ್ತು ಇದಕ್ಕೆ ಇರುವ ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡಿಮಾನ್ಸ್ ಸಂಸ್ಥೆಯ ನಿರ್ದೇಶಕ ಡಾ.ಮಹೇಶ ದೇಸಾಯಿ ಮಾತನಾಡಿ, ಡಿಮಾನ್ಸ್ ಸಂಸ್ಥೆಯು ಸಮುದಾಯದಲ್ಲಿ ಈಗಾಗಲೇ ಹಲವು ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಇದರ ಮೂಲ ಉದ್ದೇಶ ಸಮುದಾಯದಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನ ಹೋಗಲಾಡಿಸಲು ಸಹಾಯಕವಾಗಿದೆ. ಮನೋವೈದ್ಯಕೀಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಹೆಚ್ಚಿಸುವ ನಿಟ್ಟಿನಲ್ಲಿ ಡಿಮಾನ್ಸ್ ಸಂಸ್ಥೆಯಲ್ಲಿ ಈಗಾಗಲೇ ಎಂ.ಡಿ ಇನ್ ಸೈಕಿಯಾಟ್ರಿ, ಎಂ.ಫೀಲ್ ಇನ್ ಸೈಕಿಯಾಟ್ರಿಕ್ ಸೋಷಿಯಲ್ ವರ್ಕ, ಎಂ.ಫೀಲ್ ಇನ್ ಕ್ಲಿನಿಕಲ್ ಸೈಕಾಲಜಿ ಮತ್ತು ಎಂ.ಸ್ಸಿ ಇನ್ ಸೈಕಿಯಾಟ್ರಿಕ್ ನರ್ಸಿಂಗ್ ಕೋರ್ಸಗಳನ್ನು ಪ್ರಾರಂಭಿಸಲಾಗಿದೆ. ಕೋರ್ಸಗಳಿಗೆ ಹೆಚ್ಚಿನ ಮಾನ್ಯತೆ ಬಂದಿದೆ. ಸಮುದಾಯದಲ್ಲಿ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲು ವಿವಿಧ ಇಲಾಖೆಗಳು ಮತ್ತು ಸಂಘ ಸಂಸ್ಥೆಗಳು ಸಹಕಾರವನ್ನು ನೀಡುತ್ತಿವೆ ಎಂದರು.
Kshetra Samachara
10/10/2022 06:45 pm