ಧಾರವಾಡ: ಸಮಸ್ಯೆ ಬಂದಾಗ ವ್ಯಕ್ತಿಗಳು ಆತ್ಮವಿಶ್ವಾಸ ಕಳೆದುಕೊಳ್ಳದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಲು ಮುಂದಾಗಬೇಕು. ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಕೆ.ಜಿ ಶಾಂತಿ ಅವರು ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ವಿಭಾಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೋಲಿಸ್ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಹಯೋಗದಲ್ಲಿ ಡಿಮಾನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಲ್ಲಿ ಅತಿಯಾದ ಒತ್ತಡಗಳು ಬರುವುದು ಸಹಜ. ತಾಳ್ಮೆಯಿಂದ ವರ್ತಿಸಿದರೆ ಆತ್ಮಹತ್ಯೆಯನ್ನು ತಪ್ಪಿಸಬಹುದಾಗಿದೆ. ನಮ್ಮಲ್ಲಿರುವ ಸಾಮರ್ಥ್ಯಗಳನ್ನು ಅರಿತುಕೊಂಡು ಜೀವನ ನಡೆಸಬೇಕು. ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ ಕೂಡ ಅಷ್ಟೆ ಮುಖ್ಯವಾಗಿದೆ ಎಂದು ತಿಳಿಸಿದರು.
ಡಿಮಾನ್ಸ್ ಸಂಸ್ಥೆಯ ನಿರ್ದೇಶಕ ಡಾ.ಮಹೇಶ ದೇಸಾಯಿ ಮಾತನಾಡಿ, ಮಾನಸಿಕ ಆರೋಗ್ಯವನ್ನು ಸಮಗ್ರವಾಗಿ ನಿರ್ವಹಣೆ ಮಾಡುವಲ್ಲಿ ಡಿಮಾನ್ಸ್ ಸಂಸ್ಥೆಯಲ್ಲಿರುವ ಮನೋರೋಗ ವಿಭಾಗ, ಕ್ಲಿನಿಕಲ್ ಸೈಕಾಲಜಿ ವಿಭಾಗ, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ ಮತ್ತು ಸೈಕಾಟ್ರಿಕ್ ನರ್ಸಿಂಗ್ ವಿಭಾಗದ ತಂಡಗಳು ಮುಖ್ಯ ಪಾತ್ರವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ.ಸಿ.ಎಂ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಎಸ್.ಬಿ.ಕಳಸೂರಮಠ, ಎಸ್.ವಿ.ವೈ.ಎಂ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥ ಜಯಂತ್ ಕೆ.ಎಸ್., ಮನೋವೈದ್ಯೆ ಡಾ.ವೈಶಾಲಿ ಎನ್.ಹೆಗಡೆ, ಉಪಸ್ಥಿತರಿದ್ದರು.
ಡಿಮಾನ್ಸ್ ಸಂಸ್ಥೆಯ ನರ್ಸಿಂಗ್ ಹಾಗೂ ಎಂ.ಡಿ ಸೈಕಿಯಾಟ್ರಿ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮಾಜಕಾರ್ಯದ ಪ್ರಶಿಕ್ಷಣಾರ್ಥಿಗಳು, ಎಂ.ಫಿಲ್ ವಿದ್ಯಾರ್ಥಿಗಳು ಮತ್ತು ಡಿಮಾನ್ಸ್ ಸಂಸ್ಥೆಯ ಮನೋವೈದ್ಯರು, ವೈದ್ಯಾಧಿಕಾರಿಗಳು, ಭೋಧಕ ಭೋದಕೇತರ ಸಿಬ್ಬಂದಿಗಳು, ಎಸ್.ವಿ.ವೈ.ಎಂ ಸಂಸ್ಥೆಯ ಸಿಬ್ಬಂದಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ಸುನಂದಾ ಜಿ.ಟಿ ಕಾರ್ಯಕ್ರಮ ನಿರೂಪಿಸಿದರು. ಸೃಜನಾ ಕಳಸೂರಮಠ ಪ್ರಾರ್ಥಿಸಿದರು. ಪ್ರಶಾಂತ ಪಾಟೀಲ್ ಸ್ವಾಗತಿಸಿದರು, ಅಶೋಕ ಕೋರಿ ವಂದಿಸಿದರು.
Kshetra Samachara
22/09/2022 10:08 pm